0008. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ “(ತೊಡಕ ಸಿದ್ದಾಂತ)

0008. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ “(ತೊಡಕು ಸಿದ್ದಾಂತ)

…………ನಿರ್ಬಂಧಗಳಿಂದ ಅನಿರ್ಬಂಧದತ್ತ ನಡೆಸುವ ಸುವರ್ಣ ಪಥ – ಥಿಯರಿ ಆಫ್ ಕಂಸ್ಟ್ರೆಂಟ್ಸ್!

ತಿಕ್ಕಾಟಗಳ ಪರಿಹರಿಸಲು ‘ತಿಕ್ಕಾಟದ ಸಿದ್ದಾಂತ’?

ಕನ್ನಡದಲ್ಲಿ ತಾಂತ್ರಿಕ ಹಾಗೂ ಮ್ಯಾನೇಜ್ಮೆಂಟಿಗೆ ಸಂಬಂಧಿಸಿದ ಬರಹ ಬರೆಯಲು ಕಷ್ಟವೆನ್ನುವುದು ಸಾಧಾರಣ ಎಲ್ಲರ ಅಭಿಪ್ರಾಯ. ಆದರೂ ಪ್ರಯತ್ನಿಸಿ ನೋಡೋಣವೆಂದು, “ಟಿ.ಓ.ಸಿ. – ಥಿಯರಿ ಆಫ್ ಕನ್ಸ್ ಟ್ರೆಂಟ್ಸ್” ಸಿದ್ದಾಂತದ ಕುರಿತಾದ ಈ ಲೇಖನ ಬರೆದಿದ್ದೇನೆ. ತಾಂತ್ರಿಕ ಪದಗಳಿಗೆ ಹತ್ತಿರದ ಅರ್ಥ ಬರುವ ಪದ / ಪದ ಪುಂಜ ಬಳಸಿದ್ದೇನೆ. ಆಸಕ್ತಿಯಿರುವ ರೀತಿ ಇರಲೆಂದು ಕೊಂಚ ಲಘು ಹಾಸ್ಯದ ಧಾಟಿಯನ್ನು ಅಲ್ಲಲ್ಲಿ ಬಳಸಿದ್ದೇನೆ. ಈ ಸಿದ್ದಾಂತದ ಕುರಿತು ಅಷ್ಟಾಗಿ ತಿಳಿಯದವರಿಗೆ ಉಪಯುಕ್ತವಾಗಬಹುದೆಂದು ಆಶಯ. ತಾಂತ್ರಿಕ ಜ್ಞಾನವಿರದವರೂ ಸಿದ್ದಾಂತದ ತತ್ವ ಅರಿಯಲು ಸಾಧ್ಯವಾಗಲೆಂದು ಕೆಲ ಸರಳ ಉದಾಹರಣೆಗಳ ಮೂಲಕ ವಿವರಿಸಿದ್ದೇನೆ. ಆದರೂ ಉದ್ದದ ಲೇಖನ, ಅಷ್ಟು ಸುಲಭದಲಿ ಜೀರ್ಣ ವಾಗುವುದೊ, ಇಲ್ಲವೊ ಗೊತ್ತಿಲ್ಲ. ಆಸಕ್ತಿಯುಟ್ಟಿಸಿದರೆ ಓದಿ ನೋಡಿ!

_____________________________________________________________________
ಭಾಗ – 01: ಏನೀ ತೊಡಕಿನ ಸಿದ್ದಾಂತ?
_____________________________________________________________________

ಹೆಸರಲ್ಲೆ ತೊಡಕನ್ನು ಹೊತ್ತು ಬಂದಿರುವ ಯಾವುದೀ ಹೊಸ ತತ್ವ? ಮಸಲ, ಹೆಸರೆ ಸರಿಯಿದೆಯೊ, ತಪ್ಪಿದೆಯೊ ಎಂಬ ಸಂಶಯವನ್ನು ಸಹ ಮೊದಲನೆಯ ತೊಡಕಾಗಿ ಜತೆಯಲ್ಲೆ ಹೊತ್ತು ಬಂದಿರುವ ಕಾರಣ, ಮೊದಲು ಹೆಸರಿನ ವಿವಾದವನ್ನು ನಿಭಾಯಿಸಿ ನಂತರ ಉಳಿದ ವಿಷಯ ನೋಡಿಕೊಳ್ಳೋಣ. ಹೆಸರೇನೇ ಆಗಿರಲಿ, ಕೊನೆಗೆ ಅದರ ಸರಿಯಾದ ಅರ್ಥ ತಿಳಿದಿರುವುದು ಎಲ್ಲರಿಗೂ ಮುಖ್ಯ ನೋಡಿ!

ಇಂಗ್ಲೀಷಿನಲ್ಲಿ ಈಗ ” ಥಿಯರಿ ಆಫ್ ಕಂಸ್ಟ್ರೆಂಟ್ಸ್” ಎಂದು ಕರೆಯಲ್ಪಡುವ ಸಿದ್ದಾಂತ ಅಥವ ತತ್ವದ ಕನ್ನಡ ಭಾವಾನುವಾದದ ಯತ್ನ ಈ ” ತೊಡಕಿನ ಸಿದ್ದಾಂತ”ದ ಹೆಸರಿನ ಹಿಂದಿನ ಋಷಿ / ನದಿ ಮೂಲ. ಕನ್ನಡದಲಿ ಕನ್ಸ್-ಟ್ರೈಂಟು ಪದಕ್ಕೆ ನಿಯಮ, ನಿರ್ಬಂಧ, ಕಡ್ಡಾಯ, ಬಲಾತ್ಕಾರ, ಒತ್ತಾಯ – ಹೀಗೆ ಹಲವಾರು ಅರ್ಥಗಳನ್ನು ನೋಡಬಹುದಾದರೂ, ಸಿದ್ದಾಂತದ ಅರ್ಥ ಸಾಮ್ಯತೆಯಲ್ಲಿ “ನಿರ್ಬಂಧ” ಪದವೊಂದೆ ಹತ್ತಿರದ ಸಂಬಂಧಿಯಾಗಿತ್ತು. ಆದರೂ “ತೊಡಕು” ಮತ್ತು “ಅಡೆತಡೆ” ಕೂಡ ಅಷ್ಟೆ ಸೂಕ್ತವಾಗಿ ಹೊಂದಾಣಿಕೆಯಾಗಬಹುದು ಎನಿಸಿತು. ಸರಿಯಾದ ಪದಕ್ಕಾಗಿ ಹೆಚ್ಚು ತಡಕಾಡದೆ ವಸ್ತು-ವಿಷಯದತ್ತ ಹೆಚ್ಚು ಗಮನ ಹರಿಸುವ ಸಲುವಾಗಿ “ತೊಡಕು”, “ನಿರ್ಬಂಧ” ಮತ್ತು “ಅಡೆತಡೆ” ಈ ಮೂರು ಪದ / ಪದಪುಂಜಗಳ ಬಳಕೆಗೆ ಸೀಮಿತಗೊಳಿಸಿ ಈ ಲೇಖನವನ್ನು ಬರೆದಿದ್ದೇನೆ. ಈ ಪದಗಳನ್ನು ಸಹ ಒಂದರ ಬದಲಾಗಿ ಇನ್ನೊಂದನ್ನು ಒಂದೆ ಅರ್ಥದ ಪರಿಧಿಯಲ್ಲಿ ಯಥೇಚ್ಚವಾಗಿ ಬಳಸಿದ್ದೇನೆ. ಈ ತತ್ವದ ಅರಿವಿಗೆ, ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಇದರಿಂದ ಹೆಚ್ಚೇನು ಭಂಗ ಬರುವುದಿಲ್ಲವೆಂದು ನನ್ನ ಭಾವನೆ. ಒಂದು ವೇಳೆ ಸಹೃದಯ ಓದುಗ ಬಳಗ ಯಾ ಸ್ನೇಹಕೂಟದ ದೆಸೆಯಿಂದಾಗಿ ಇನ್ನು ಹೆಚ್ಚು ಸೂಕ್ತಪದದ ಸುಳಿವು ಸಿಕ್ಕರೆ, ಈ ಪದಗಳ ಬದಲು ಅದನ್ನೆ ಧಾರಾಳವಾಗಿ ಬಳಸಲು ಖಂಡಿತ ನನ್ನಡ್ಡಿಯಿಲ್ಲ. ಹೆಸರಿಗಿಂತ ಅದರ ಅರಿವು, ಜ್ಞಾನ ಮುಖ್ಯ ಎಂಬ ತತ್ವ ಸಿದ್ದಾಂತದ ಆಲೋಚನಾಶಾಲೆಯ ವಿದ್ಯಾರ್ಥಿ ನಾನು. ಹೆಸರೇನಿದ್ದರೂ ಸಾಮಾನ್ಯ ಮತ್ತು ಸಹಮತಪೂರಿತ ಅರ್ಥಾವಗಾಹನೆಗಷ್ಟೆ ಮುಖ್ಯ ಎಂದು ನಂಬಿದವನು!

ಹೆಸರಿನ ಕುರಿತ ಈ ಮಾತು ಬಂದಾಗ ತೊಡಕಿನ ಸಿದ್ದಾಂತಕ್ಕೆ ನೇರ ಸಂಬಂಧಿಸದಿದ್ದರು, ಈ ಪುಟ್ಟ ಪ್ರವರವನ್ನು ಹೇಳಿ ನಂತರ ಮುಖ್ಯ ವಿಷಯಕ್ಕೆ ಬರುತ್ತೇನೆ (ಕೊಂಚ ಲಘುವಾದ ಹಾಸ್ಯದ ಲೇಪವಿದ್ದರೆ, ಈ “ಸೀರಿಯಸ್”ಬರಹಗಳು ತುಸುವಾದರು ಓದರಿಯಲು ಪ್ರೇರೇಪಿಸಬಹುದೆಂಬ ದುರಾಸೆ!). ನನ್ನ ಅಪ್ಪ ಅಮ್ಮ ನನಗಿಟ್ಟ ಹೆಸರು ಒಂದೆ ಪದದ ಸರಕು. ಮೂರುಹೊತ್ತಿನ ಗಂಜಿಗೆ ನೂರಿಪ್ಪತ್ತು ತರದ ಸರ್ಕಸ್ಸು ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಕರೆಯಲೊಂದು ಹೆಸರಿದ್ದರೆ ಸಾಕೆಂದು ಯಾವುದೊ ಬಾಯಿಗೆ ಸಿಕ್ಕ, ಮನಸಿಗೆ ಹೊಳೆದ ಅಥವಾ ಯಾವುದಾದರು ಇಷ್ಟದೈವದ ಹೆಸರಿಟ್ಟು ಕೈತೊಳೆದುಕೊಳ್ಳುವುದು ಸಾಮಾನ್ಯ ರೂಢಿ. ನಮ್ಮ ಕುಟುಂಬವು ಈ ಸುವರ್ಣ ಸೂತ್ರದ ಹೊರತೇನೂ ಆಗಿರಲಿಲ್ಲ. ಕರೆಯಲೊಂದು ಹೆಸರಿದ್ದರೆ ಸರಿಯೆನ್ನುವ ಜನಕ್ಕೆ, ಹೆಸರಲ್ಲೆ “ಮೊದಲ ಹೆಸರು” ” ಮಧ್ಯದ ಹೆಸರು” “ಕಡೆ ಹೆಸರು” ಇಡಬೇಕೆಂದರೆ ಅರ್ಥವಾಗುವುದಾದರೂ ಹೇಗೆ? ಅಬ್ಬಬ್ಬಾ ಎಂದರೆ ಅವರರಿವಿಲ್ಲದೆ ಕುಟುಂಬದ ಹೆಸರಾಗಿ ಶೆಟ್ಟಿಯೊ, ರೆಡ್ಡಿಯೊ ಸೇರಿಕೊಂಡಿದ್ದರೆ ಅದೇ ದೊಡ್ಡ ಆಕಸ್ಮಿಕ. ಪುಣ್ಯವಶಾತ್ ಸ್ಕೂಲಿಗೆ ಹಾಕುವಾಗ ಹುಟ್ಟಿದೂರು ಮತ್ತು ಅಪ್ಪನ ಹೆಸರನ್ನು ಹೆಸರಿನ ಹಿಂದೆ ಇನಿಷಿಯಲ್ಲಾಗಿ ಸೇರಿಸಿದ್ದರಿಂದ ಖಾಲಿ ಹೊಡೆಯುತ್ತಿದ್ದ ಹೆಸರಿಗೊಂದು ತರ ಖಳೆ ಬಂದಂತಾಗಿ, ಹಳ್ಳಿ ಗಮಾರನ ಅವತಾರದಿಂದ ಸಿಟಿಯವನ ಸೂಟುಬೂಟಿನ ಥಳುಕುಬಳುಕಿಗೆ ಜಿಗಿದಂತಾಗಿತ್ತು. ಓದು ಮುಗಿದು, ಕೆಲಸ ಹಿಡಿದಾಗಲೂ ಈ ಹೆಸರು ಏನೂ ತೊಡಕಾಗಲಿಲ್ಲ. ವಿದೇಶ ವಿಮಾನ ಹತ್ತಲು ಪಾಸ್ಪೋರ್ಟು ಮಾಡಿಸಲು ಹವಣಿಸಿದೆ ನೋಡಿ, ಅಲ್ಲಿಂದ ಶುರುವಾಯ್ತು ಪೀಕಲಾಟ. ಕನಿಷ್ಟ ಇಟ್ಟ ಹೆಸರು / ಕುಟುಂಬದ ಹೆಸರು (ಅಥವ ಮೊದಲಾ ಮತ್ತು ಕಡೆ ಹೆಸರು) ಅಲ್ಲಿ ತುಂಬಲೆ ಬೇಕಲ್ಲಾ? ಸರಿ, ಇನಿಷಿಯಲ್ಲುಗಳು ಹೇಗೂ ಇದೆಯಲ್ಲ! ಮೊದಲ ಭಾಗ ‘ಇಟ್ಟ ಹೆಸರಿನ’ ಸ್ಥಳದಲ್ಲಿ ನನ್ನ ನಿಜವಾದ ಹೆಸರು ಮತ್ತು ಊರಿನ ಹೆಸರನ್ನು ಜೋಡಿಸಿ ಸಂಕ್ಷಿಪ್ತವಿರದ ಹಾಗೆ ಪೂರ್ತಿ ಬರೆಸಿದ್ದಾಯ್ತು; ಇನ್ನು ಎರಡನೆ ಭಾಗಕ್ಕೆ ಅಪ್ಪನ ಹೆಸರು ಇದ್ದೆ ಇದೆಯಲ್ಲ!

ಆದರೆ, ಇನ್ನೂ ನಿಜವಾದ ಪೀಕಲಾಟಕ್ಕಿಟ್ಟುಕೊಂಡಿದ್ದು ವಿದೇಶಿ ನೆಲದಲ್ಲಿ ಕಾಲಿಟ್ಟು ಕೆಲಸ ಆರಂಭಿಸಿದಾಗಲೆ! ಕಂಪ್ಯೂಟರು ವಿಭಾಗದ ಸಹೋದ್ಯೋಗಿಯೊಬ್ಬರು ನನ್ನ ಹೊಸ ‘ಮಿಂಚಂಚೆ’ ತೆರೆಯಲು, ಮೊದಲ ಹಾಗೂ ಕಡೆ ಹೆಸರನ್ನು ಕೇಳಿದಾಗ ಮೇಲೆ ಕೆಳಗೆ ನೋಡುವಂತಾಯ್ತು. ಯಥಾರೀತಿ ಅವನ ಬಳಿ ಪ್ರವರ ಬಿಚ್ಚಿದೆ – ನನಗೊಂದೆ ಇಟ್ಟ ಹೆಸರು, ಮೊದಲ ಹಾಗು ಕಡೆಯದು ಅಂತೇನೂ ಇಲ್ಲ..ಇತ್ಯಾದಿ, ಇತ್ಯಾದಿ. ಪಾಪದವನು ತಾಳ್ಮೆಯಿಂದ ಕೇಳಿಸಿಕೊಂಡು ಕೊನೆಗೆಂದ – “ಸಾರಿ, ದಿಸಿಸ್ ದ ರೂಲ್ಸ್ ಹಿಯರ್; ಆಲ್ಸೊ, ಅನ್ಲೆಸ್ ಐ ಹ್ಯಾವ್ ಬೊಥ್ ಫೀಲ್ಡ್ಸ್, ಐ ಕಾಂಟ್ ಕ್ರೀಯೇಟ್ ದ ಯುಸರ ಐಡಿ ಇನ್ ಸಿಸ್ಟಂ..” ಎಂದ. ತೆಪ್ಪನೆ ಪಾಸ್ಪೋರ್ಟು ಬಿಚ್ಚಿ ತೋರಿಸಿದೆ. ನನ್ನ ನಿಜ ನಾಮಧೇಯ ” ಮೊದಲ ಹೆಸರಾಯ್ತು”, ಊರಿನ ಹೆಸರು”ಕೊನೆಯ ಹೆಸರಾಯ್ತು”! ಅಲ್ಲಿಂದಾಚೆಗೆ ಎಲ್ಲಾ ಸುಲಭವಾಯ್ತು – ಒಂದು ಬಾರಿ ಮಾಡಿದ್ದು ಪದೆಪದೆ ಮಾಡಲು ಅನುಭವಶಾಲಿಗಳಿಗೆ ಸುಲಭ ತಾನೆ? ಬ್ಯಾಂಕು, ಇಮ್ಮಿಗ್ರೇಷನ್ನು, ಕ್ರೆಡಿಟ್ ಕಾರ್ಡು – ಎಲ್ಲಾಕಡೆಗೂ ರಾಮಬಾಣದ ಹಾಗೆ ಅದೆ, ಒಂದೇ ಮಂತ್ರ!

ಈಗಲೂ ಬರುವ ಎಷ್ಟೊ ಇ-ಮೈಯಿಲುಗಳಲ್ಲಿ ಕೆಲವಲ್ಲಿ ನನ್ನ ಹೆಸರಿನ ನೇರ ಸಂಭೋಧನೆಯಿದ್ದರೆ, ಇನ್ನು ಕೆಲವರು “ಮಿಸ್ಟರು ಮೈಸೂರು” ಅಂತಲೆ ಆರಂಭಿಸುತ್ತಾರೆ. ಈಗಾಗಲೆ ಚೆನ್ನಾಗಿ ಅಭ್ಯಾಸವಾಗಿ ಹೋಗಿದೆಯಾದ್ದರಿಂದ ನಾನು ಅಷ್ಟೆ ಆರಾಮವಾಗಿ ಉತ್ತರಿಸುತ್ತೇನೆ – ಹೇಳಿಕೇಳಿ, ಹೆಸರಿನಲೇನಿದೆ ಹೇಳಿ?

ತೊಡಕಿನ ಸಿದ್ದಾಂತದ ಬಗ್ಗೆ ಹೇಳಹೊರಟು, ಹೆಸರಿನ ತೊಡಕಿನ ಬಗ್ಗೆ ಬರೆಯಬೇಕಾಗಿ ಬಂದದ್ದು ಕಾಕತಾಳೀಯವಾದರೂ, ಈ ಸಿದ್ದಾಂತ ಬರಿ ಔದ್ಯೋಗಿಕ ಜಗತ್ತಿಗೆ ಮಾತ್ರವಲ್ಲ, ವೈಯಕ್ತಿಕ ಜೀವನಕ್ಕೂ ಅಳವಡಿಕೆಯಾಗಬಲ್ಲ ಮತ್ತು ತೊಡಕನ್ನು ನಿವಾರಿಸಬಲ್ಲ ಸಂಜೀವಿನಿ ಎಂದು ಹೆಸರಿಸುತ್ತಾರಾಗಿ, ಈ ತೊಡಕು, ಒಂದು ರೀತಿ ಲೇಖನದ ವಸ್ತುವಿಗೆ ಸಂಬಂಧ ಪಟ್ಟಿದ್ದೇ, ಎಂದು ತೀರ್ಮಾನಿಸಿ ಮುಂದುವರೆಯೋಣ ಮುಖ್ಯ ವಸ್ತುವಿಗೆ!! (ಎಲ್ಲಿ ಬೇಕಾದರೂ ಎಂಬುದು ಈ ತತ್ವದ ಮೂಲ ಕತೃ ಎಲಿಯ್ಯಾಹು ಗೋಲ್ಡ್ರಾಟ ರವರ ಅಭಿಪ್ರಾಯ – ಇನ್ನು ಓದಿಲ್ಲದಿದ್ದರೆ, ಓದಿನೋಡಿ, ಅವರ ಹೆಸರಾಂತ ಕೃತಿ – ದಿ ಗೋಲ್, ಭಾರತೀಯ ಮುದ್ರಿತ ಅವೃತ್ತಿಯೂ ಲಭ್ಯವಿದೆ).

ಈ ಸಿದ್ದಾಂತವನ್ನರಿಯಲು ಮತ್ತು, ಮತ್ತೆ ಹರಿಕಥೆಗೆ ಉಪಕಥೆಯಾದಂತೆ ವಿಷಯಾಂತರ ಮಾಡದಿರಲು, ಒಂದು ಪುಟ್ಟ ಸೀಮಾರೇಖೆಯ ಪರಿಧಿಯನ್ನು ಹಾಕಿಕೊಳ್ಳೋಣ. ಓದಿನ ಕೊನೆಯಲ್ಲಿ ಕನಿಷ್ಟ ಅಷ್ಟೂ ವಿಷಯಗಳಿಗೆ ಮಾನ್ಯತೆ / ಅವಕಾಶ ದೊರಕಿದ್ದರೆ ಈ ಬರಹದ ಉದ್ದೇಶದ ಗುರಿ ಮುಟ್ಟಿದಂತೆ. ಪರಿಧಿಯಿಲ್ಲದೆ ಲಹರಿ ಬಿಟ್ಟರೆ, ಮತ್ತೆಲ್ಲೊ ತೇಲಿ ಹೋಗುವ ಸಾಧ್ಯತೆಯೆ ಹೆಚ್ಚು – ಹಾರುತ ದೂರಾ, ದೂರಾ ಅನ್ನುವ ಹಾಗೆ!

ಇನ್ನು ಪರಿಧಿಯ ಮಾತಿಗೆ ಬಂದರೆ –

1. ಏನಿದು ತೊಡಕಿನ ಸಿದ್ದಾಂತವೆಂದರೆ? ಏನಿದರ ಹಿನ್ನಲೆ?
2. ಈ ಸಿದ್ದಾಂತ / ತತ್ವದ ಬಳಕೆಯ ವ್ಯಾಪ್ತಿ ಮತ್ತು ಮಿತಿಗಳೇನು? ಎಲ್ಲೆಲ್ಲಿ ಮತ್ತು ಹೇಗೆ ಬಳಸಬಹುದು?
3. ಈ ಸಿದ್ದಾಂತದ ಮೂಲಾಧಾರ ಸ್ತಂಭಗಳಿದ್ದರೆ ಅವು ಯಾವುವು? (ಕಾಮನ್ ಸೆನ್ಸ್ – ಸಾಮಾನ್ಯ ಜ್ಞಾನ, ಸೊಕ್ರಟಿಕನ – ಪ್ರಶ್ನಾರ್ಥಗಳಿಂದ ಉತ್ತರಕ್ಕೆ ಸೆಣೆಸುವ ವಿಧಾನ, ಲೋಕಲ್ ಆಪ್ಟಿಮ ಗ್ಲೊಬಲ್ ಆಪ್ಟಿಮ)
4. ಅಂಕಿ-ಅಂಶ ತತ್ವಾಧಾರಿತ ಏರಿಳಿತಗಳ ಗಣನೆ ಯಾ ಅಂಕಿ-ಅಂಶಾಧಾರಿತ ಕಂಪನಗಳ ಗಣನೆ ಮತ್ತು ಪರಾವಲಂಬಿತ ಘಟನಾತ್ಮಕತೆಯ ಗಣನೆ ( ಸ್ಟಾಟಿಸ್ಟಿಕಲ್ ಫ್ಲಕ್ಚುಯೇಶನ್ ಮತ್ತು ಡಿಪೆಂಡೆಂಟ್ ಈವೆಂಟ್ಸ್ ಮತ್ತವುಗಳ ಗಣನೆ ಹಾಗೂ ಪರಿಣಾಮ / ಪರಿಮಾಣ)
5. ಕಿವುಚು-ಕತ್ತಿನ ಬಾಟಲಿಯ ಪರಿಣಾಮ / ಇಕ್ಕಟ್ಟುಕತ್ತಿನ ಶೀಷೆಯ ಪರಿಣಾಮ (ಬಾಟಲ್-ನೆಕ್ ಎಫೆಕ್ಟ್ ಮತ್ತದರ ಪ್ರಾಮುಖ್ಯತೆ)
6. ಅಳೆಯುವ ಮಾನದಂಡಗಳ ಉದಾಹರಣೆ – ಕಾಂಚಾಣೊತ್ಪಾದನಾ ವೇಗ (ಥ್ರೂ – ಪುಟ್), ಮಾರಾಟವಾಗಬಲ್ಲ ಬಂಡವಾಳ (ಇನ್ವೆಂಟರಿ) , ಪರಿವರ್ತನಾ ಕಾಂಚಣ (ಆಪರೇಟಿಂಗ್ ಎಕ್ಸ್ ಪೆನ್ಸಸ್)
7. ಸುವರ್ಣ ಸೂತ್ರದ ಬಂಗಾರದ ತ್ರಿಭುಜ – (ಕಾರ್ಯತಂತ್ರದ ಕೆಂದ್ರಬಿಂದು ಮತ್ತದರ ಸಂಬಂಧ)
8. ನೈಜ್ಯತೆಯ ವೃಕ್ಷಗಳು – ಪ್ರಸ್ತುತ ವೃಕ್ಷಗಳು, ತಾತ್ಕಾಲಿಕ ಸೇತುವೆ ವೃಕ್ಷಗಳು ಮತ್ತು ಭವಿತದ ವೃಕ್ಷಗಳು (ರಿಯಾಲಿಟಿ ಟ್ರೀಸ್ – ಕರೆಂಟ್, ಟ್ರಾನ್ಸಿಶನ್, ಫ್ಯೂಚರು – ಸಿ.ಆರ.ಟಿ, ಟಿ.ಆರ.ಟಿ, ಎಫ್.ಆರ.ಟಿ)
9. ಖಾಸಗಿ ಬದುಕು ಮತ್ತು ಟಿಓಸಿ

ನಿರ್ಬಂಧ ಸಿದ್ದಾಂತ / ತತ್ವದ ಕುರಿತು ಬರೆಯಹೊರಟರೆ ಆಳ ಅಗಲದ ಮೇಲವಲಂಬಿಸಿ ಪುಸ್ತಕಗಳನ್ನೆ ಬರೆಯುವಷ್ಟು ವ್ಯಾಪ್ತಿಯಿರುವುದರಿಂದ ಈ ಲೇಖನದಲ್ಲಿ ಕೇವಲ ಸಿದ್ದಾಂತ ಯಾ ತತ್ವ ಗ್ರಹಣೆ ಮತ್ತು ಸೈದ್ದಾಂತಿಕ ಅನುಸಂಧಾನತೆಯನ್ನು ಮಾತ್ರ ಮುಖ್ಯ ಗಮ್ಯವಾಗಿರಿಸಿಕೊಂಡಿದೆ. ಹೆಚ್ಚಿನ ಆಳ ಬಯಸುವ ಓದುಗರು ಬೇರೆ ಆಕರಗಳನ್ನು ಸೋಸಬೇಕಾಗುತ್ತದೆ. ಈಗ ಒಂದೊಂದಾಗಿ ಈ ಮೇಲಿನ ವಿಷಯಗ್ರಹಿಕೆಗೆ ಪ್ರಯತ್ನಿಸೋಣ.

………..ನಿರ್ಬಂಧಗಳಿಂದ ಅನಿರ್ಬಂಧದತ್ತ ನಡೆಸುವ ಸುವರ್ಣ ಪಥ – ಥಿಯರಿ ಆಫ್ ಕಂಸ್ಟ್ರೆಂಟ್ಸ್!

ತಿಕ್ಕಾಟಗಳ ಪರಿಹರಿಸಲು ‘ತಿಕ್ಕಾಟದ ಸಿದ್ದಾಂತ’?
____________________________________________________________________
ಭಾಗ – 02: ನಿರ್ಬಂಧ ಸಿದ್ದಾಂತ (ಅಡೆತಡೆ ಸಿದ್ದಾಂತ / ತೊಡಕಿನ ಸಿದ್ದಾಂತ) – ಹಿನ್ನಲೆ, ಮತ್ತದರ ಮೂಲ ತತ್ವ
_____________________________________________________________________

ಈ ತತ್ವ ಪ್ರಮುಖವಾಗಿ ಬಳಕೆಗೆ ಬಂದದ್ದು ವಾಣಿಜ್ಯೋದ್ದೇಶದ ಕಾರ್ಖಾನೆ, ಸಂಸ್ಥೆಗಳ ಸಲುವಾಗಿ; ಅವುಗಳನ್ನು ಅವುಗಳ ಗಮ್ಯದತ್ತ ಯಶಸ್ವಿಯಾಗಿ ಕರೆದೊಯ್ಯಲು ಬೇಕಾದ ಮ್ಯಾನೆಜ್ಮೆಂಟ್ ಚಿಂತನೆ, ವಿವರವಾದ ಕಾರ್ಯಸೂಚಿ ತಂತ್ರ, ನಿಖರವಾದ ಮತ್ತು ಕರಾರುವಾಕ್ಕಾದ ವಿಧಾನ ಮತ್ತು ಸರಿಯಾದ ಹಾದಿಯಲ್ಲಿದ್ದೇವೊ ಇಲ್ಲವೊ ಎಂಬುದನ್ನು ಅಳೆಯುವ ಮಾನದಂಡಗಳು – ಇವೆಲ್ಲವನ್ನು ಒಳಗೊಂಡ ಸಂಪೂರ್ಣ ಪರಿಕರಗಳ ಮ್ಯಾನೇಜ್ಮೆಂಟ್ ಕಿಟ್. ಈಗಿನ ಕೈಗಾರಿಕಾಯುಗದಲ್ಲಿ ಕಾರ್ಖಾನೆ ಯಾ ಕೈಗಾರಿಕ ಜೀವನದಡಿ ಸಿಕ್ಕು, ಕೆಲಸದ ಬದುಕಿನಲ್ಲಿ ಮತ್ತು ಖಾಸಗಿ ಬದುಕಿನಲ್ಲಿ ನೂರೆಂಟು ತರದ ಹೊಂದಾಣಿಕೆ ಮಾಡಿಕೊಳ್ಳುತ್ತ, ವಿಧವಿಧದೊತ್ತಡದಲಿ ನರಳುತ್ತ ದೈನಂದಿನ ಒದ್ದಾಟದಲಿ ನರಳುವ, ಹೆಣಗುತಲೆ ಜೀವನ ಸಾಗಿಸುತ ಉತ್ತರವಿಲ್ಲದ ಯಕ್ಷ ಪ್ರಶ್ನೆಗಳಿಗೆ ಹೇಗೊ ತಾರಾಡುತ್ತ ದಿನದೂಡುವ ಸಮಾಜಕ್ಕೆ, ವ್ಯಕ್ತಿಗಳಿಗೆ ಹೊಸದೊಂದು ವಿಭಿನ್ನ ರೀತಿಯ ಪಥದ ಪರಿಚಯ ಮಾಡಿಕೊಡುವ , ಆ ಮೂಲಕ ಎಲ್ಲಾ ಕಾಡುವ ಪ್ರಶ್ನೆಗಳಿಗೆ ಸರಳ, ಸುಂದರ, ಸಮಯೋಚಿತ ಉತ್ತರ ತಡಕಿ ನಿರಾಳವಾಗುವ ಸುವರ್ಣಹಾದಿ ಎಂಬುದು ಈ ತತ್ವ ನಂಬಿದವರ ಅಂಬೋಣ. ಇಡಿ ವ್ಯವಸ್ಥೆಯ ಆಡಳಿತವನ್ನೆ ಹೊಚ್ಚಹೊಸ ಹಾದಿಯಿಡಿದು , ತಾನು ಪರಂಪರಾಗತ ನಡೆದು ಬಂದ ದಾರಿಯಿಂದ ತೀರಾ ಬೇರೆಯದೆ ದಾರಿಗೆಳೆಯುವ ಹರಿಕಾರನಂತೆ ಇವ.

ಹತ್ತೊಂಭತ್ತನೆ ಶತಮಾನದ ಕೈಗಾರಿಕಾ ಕ್ರಾಂತಿ ಎಬ್ಬಿಸಿದ ಬಿರುಗಾಳಿ ತಂದಿಕ್ಕಿದ ಅನೇಕಾನೇಕ ಬದಲಾವಣೆಗಳು, ಆ ನಂತರದ ದಿನಗಳಲ್ಲಿ ಮತ್ತು ಈಗಲೂ ತಮ್ಮ ಬಲವಾದ ಛಾಪನ್ನೊತ್ತಿ ಕೈಗಾರಿಕ ಸಂಸ್ಥೆಗಳ ಮೇಲುಂಟುಮಾಡಿದ ಅಗಾಧ ಪರಿಣಾಮ ಬಣ್ಣಿಸಲಸದಳ – ಅದರಲ್ಲೂ ಉತ್ಪಾದನಾ ಘಟಕಗಳನ್ನು ಮುನಡೆಸುವ, ನಿಯಂತ್ರಿಸುವ, ಬದಲಾವಣೆಗೆ ಆಯೋಜಿಸುವ ಹಾಗು ಗ್ರಾಹಕನ ಬೇಕು, ಬೇಡಗಳಿಗೆ ಪ್ರತಿಸ್ಪಂದಿಸುವ, ಗುಣಮಟ್ಟದ ಏರಿಳಿತಗಳನ್ನು ಹದ್ದಿನ ಕಣ್ಣಿಟ್ಟು ಕಾಯ್ವ, ಕೊನೆಗೆ – ಏನೆ ಮಾಡಿದರು, ಉತ್ಪಾದಕತೆಯ (ಪ್ರೊಡಕ್ಟಿವಿಟಿ) ಪರಿಧಿಯ ನೆಲೆಗಟ್ಟಿನಲ್ಲಿ ಎಲ್ಲವನ್ನು ಸಂಭಾಳಿಸುವ ಅದೆಷ್ಟೊ ವಿಧಿವಿಧಾನಗಳು ಈ ಕ್ರಾಂತಿಯ ಕೊಡುಗೆಗಳೆ. ಇಂದು ದೊಡ್ಡ ದೊಡ್ಡ ಕಾರ್ಖಾನೆ, ವಾಣಿಜ್ಯ ಸಂಸ್ಥೆಗಳು ಬೈಬಲ್ಲಿನಂತೆ ಪಾಲಿಸುವ ‘ವೆಚ್ಚ ನಿಯಂತ್ರಣಾ ಸೂತ್ರ ವಿಧಾನ’ ಗಳೆಲ್ಲಾ ( ಕಾಸ್ಟ್ ಅಕೌಂಟಿಂಗ್ ಮತ್ತು ಕಂಟ್ರೋಲಿಂಗ್) ಆ ಕಾಲದ ಅನ್ವೇಷಣೆಗಳು. ಉತ್ಪಾದನ ಸಾಮರ್ಥ್ಯ / ಉತ್ಪಾದಕತೆ / ದಕ್ಷತೆಯ ಬೆನ್ನು ಹಿಡಿದ ಈ ಮಾನಕಗಳು ಸರಪಳಿಯ ಕೊಂಡಿಗಳಂತೆ ಕಾರ್ಖಾನೆ / ಸಂಸ್ಥೆಯ ಎಲ್ಲ ಅಂಗ ವಿಭಾಗಗಳಿಗೂ ಆಯಾ ಕಾರ್ಯ ವ್ಯಾಪ್ತಿಯ ಮಟ್ಟಿಗೆ ಒದಗುವಂತೆ ಪರಿವರ್ತನೆಗೊಂಡು ಗಮ್ಯಗಳ ರೂಪದಲ್ಲೊ, ಅಳೆಯುವ ಮಾನದಂಡಗಳ ರೂಪದಲ್ಲೊ ಇಡಿ ಸಂಸ್ಥೆಯ ಶಿರದಿಂದಂಗುಷ್ಟದವರೆಗಿನ ಎಲ್ಲಾ ಮೂಲೆಗೂ ಹಬ್ಬಿ, ಎಲ್ಲ ಕಾರ್ಯ ನಿರ್ಧಾರ ಚಟುವಟಿಕೆಗಳನ್ನು ನಡೆಸಲು ಪ್ರಭಾವ ಬೀರುವುದು ಎಲ್ಲೆಡೆಯು ಕಾಣಬರುವ ಸಾಮಾನ್ಯ ದೃಶ್ಯ.

ಇದು ಬದಲಾವಣೆಯ ಯುಗ, ಬದಲಾವಣೆಯೊಂದೆ ಶಾಶ್ವತವೆಂದೆ ಎಲ್ಲರಾಡುವ ಲಾವಣಿ. ಹೀಗಿರುವಾಗ, ಹತ್ತೊಂಭತ್ತನೆ ಶತಮಾನದಲಿ ನಿರೂಪಿಸಿದ ಮಾನಕಗಳೆಲ್ಲ ಈಗಲೂ ಸಮಯೋಚಿತವೆಂದು ಹೇಳುವುದಾದರೂ ಹೇಗೆ? ಆ ಕಾಲದಲಿದ್ದ ಪರಿಸ್ಥಿತಿ, ಪರಿಸರದ ಒತ್ತಡಗಳು, ಮೇಲಾಗಿ ಆ ದಿನಗಳಿಗನುಗುಣವಾದ ‘ಅನಿಸಿಕೆ / ನಂಬಿಕೆಗಳು’ ( ಅಸಂಷನ್ಸ್ ಅಂಡ್ ಬಿಲೀಫ್ಸ್ ) ಅಂದಿನ ನಿರ್ಧಾರಗಳ ಮೇಲೆ ಪ್ರಭಾವ ಬೀರಿ ಆ ಕಾಲದ ನಿಯಮಗಳ ಆಕಾರ, ಸ್ವರೂಪಕ್ಕೆ ಕಾರಣವಾದವು. ಆದರವು ಈಗಲೂ ಸುಸಂಗತವೆ? ಹೆಚ್ಚು ಕಡಿಮೆ ಅದೇ ಮೂಲ ರೂಪದಲ್ಲಿ ಅದನ್ನುಳಿಸಿಕೊಳ್ಳುವುದು ಮತ್ತು ಪರಿಪಾಲಿಸುವುದು ಅದೆಷ್ಟರ ಮಟ್ಟಿಗೆ ಸರಿ? ಕಾಲಕ್ಕೆ ತಕ್ಕ ಹಾಗೆ ಅದನ್ನೆಲ್ಲಾ ಪರಾಮರ್ಶಿಸಿ, ಸಂಸ್ಕರಿಸಿ, ಅಗತ್ಯವಾದರೆ ಬುಡ ಸಿದ್ದಾಂತಗಳನೆ ಮೂಲೋತ್ಪಾಟನೆಗೊಳಿಸಿ ಸರಿ-ಸೂಕ್ತವಾದ ಹೊಸ ರೀತಿ ನೀತಿಗಳನ್ನಳವಡಿಸಿಕೊಳ್ಳಬೇಕೆಂಬುದು ನಿರ್ಬಂಧವಾದಿಗಳ ಅಳಲು. ಅದನ್ನು ಏಕೆ, ಹೇಗೆ ಮಾಡಬೇಕೆಂಬುದರ ಸಮಗ್ರ ತತ್ವ, ರೂಪುರೇಷೆ, ವಿಧಿ ವಿಧಾನಗಳ ಕೈಪಿಡಿ “ತೊಡಕಿನ ಸಿದ್ದಾಂತದ ಶಾಸ್ತ್ರ”; ಇಡಿ ವ್ಯವಸ್ಥೆಯಲ್ಲೆ (ಆಲೋಚನಾವಿಧಾನವೂ ಸೇರಿದಂತೆ) ಅಮೂಲಾಗ್ರ ‘ಧನಾತ್ಮಕ’ ಬದಲಾವಣೆ ತರಬೇಕು / ತರಬಹುದೆಂಬ ಆಶಯ ಈ ತತ್ವ ಶಾಸ್ತ್ರಿಗಳದು.

ಆದರೆ ಈಗಿರುವ ಸ್ಥಿತಿಯನ್ನು ಅಮೂಲಾಗ್ರ ಬದಲಾಯಿಸದೆ, ಕಾಣಿಸಿಕೊಂಡ ರೋಗ ಲಕ್ಷಣಗಳಿಗೆ ಔಷದಿ ಕೊಡುತ್ತ, ಯಥಾರೀತಿಯ ಸಮಗ್ರ ಸ್ಥಿತಿ ಮುಂದುವರಿಕೆಗೆ ಕಟ್ಟಾ ಸಂಪ್ರದಾಯಬದ್ದ ಶಾಸ್ತ್ರಿಗಳ ಹಂಬಲ – ಶತಮಾನಗಳಿಂದ ಕೈ ಹಿಡಿದು ನಡೆಸಿಕೊಂಡು ಬಂದ ವಿಧಿ, ವಿಧಾನಗಳು ಹಳತೆಂದ ಮಾತ್ರಕ್ಕೆ ಕೊಳೆತುಹೋದಾವೆ? ಅವು ಇಂದಿಗು, ಮುಂದಿಗು ಅಷ್ಟೆ ಪ್ರಸ್ತುತ ಎನ್ನುತ್ತ ಇದರ ಸರಹದ್ದು ಕಾಯುವ ರಣಹದ್ದಿನ ಹವಣಿಕೆ ಈ ಶಾಸ್ತ್ರದ್ದು. ಅದರ ಹಿಂದಿರುವ ಕಾಳಜಿ, ಆತಂಕ ಅರ್ಥವಾಗದ್ದೇನಲ್ಲ ; ಈಗಿರುವ ಎಲ್ಲಾ ತರಹದ ಕೆಲಸಗಳ ಸೃಷ್ಟಿ, ಸಂಸ್ಥೆಗಳ ಅಂಗರಚನಾ ವಿಧಾನ, ಕಾರ್ಯತಂತ್ರಗಳ ವ್ಯೂಹ – ಎಲ್ಲವು ಈ ಸಂಪ್ರದಾಯಬದ್ದ ಸಿದ್ದಾಂತ ಬಲದ ಮೇಲೆ ನಿರ್ಮಿತವಾದದ್ದು. ಅದರ ಮೂಲವನ್ನೆ ಪ್ರಶ್ನಿಸಿ ಅಲುಗಾಡಿಸಿಬಿಟ್ಟರೆ, ಅಡಿಪಾಯವೆ ಕುಸಿದು ಇಡಿ ವ್ಯವಸ್ಥೆಯೆ ಅಲ್ಲೋಲಕಲ್ಲೋಲವಾಗಿಬಿಡುವುದಿಲ್ಲವೆ? ನಾವೀಗಿರುವ ಸಮತೋಲನ ಸ್ಥಿತಿಯನ್ನೆ ಎಕ್ಕುಡಿಸಿ ಬೀದಿಗೆ ಬೀಳಿಸುವಂತಾಗಬಾರದಲ್ಲ? ಅಲ್ಲದೆ – ಜಗತ್ತಿನೆಲ್ಲೆಡೆ ಎಲ್ಲರು ಇದನ್ನೆ ಮಾಡುತ್ತಿದ್ದಾರೆಂದ ಮೇಲೆ, ಅವರೇನು ಪೆದ್ದರಲ್ಲ, ತಾನೆ? ಎಲ್ಲಾ ಒಂದೆ ರೀತಿಯ ನೆಲೆಗಟ್ಟಿನಲಿದ್ದರೆ ತಾನೆ ಪರಸ್ಪರ ಹೋಲಿಕೆ, ತನ್ಮೂಲಕ ಸ್ವವಿಮರ್ಶೆ, ಪ್ರಗತಿಯತ್ತ ಹೆಜ್ಜೆ ಸಾಧ್ಯ? ಹೀಗೆ ಸಹಜ ಸ್ಥಿತಿಯನ್ನು ಹಾಗೆ ಕಾಯ್ದುಕೊಳ್ಳುವತ್ತ ಓಡುತ್ತದೆ ಪ್ರಸ್ತುತದ ಹಿಂದಿರುವ ವಾದಸರಣಿ.

ಕಾರ್ಖಾನೆ ಅಥವಾ ಯಾವುದೆ ವಾಣಿಜ್ಯೋದ್ದೇಶದ ಸಂಸ್ಥೆಯೊಂದರ ಮೂಲೋದ್ದೇಶವೇನು? ಅಂತಿಮ ಕಾಲಾತೀತ ಪರಮೋದ್ದೇಶವೇನು? ಹಣಗಳಿಕೆ ತಾನೆ? ಬಂಡವಾಳದಾರನಿಗೆ ಹಾಕಿದ ಹಣಕ್ಕೆ ಲಾಭ, ಉದ್ಯೋಗಿಗೆ ತೃಪ್ತಿ ತರುವ ಕೆಲಸ, ಗ್ರಾಹಕನಿಗೆ ಸಂತೃಪ್ತಿ ತರುವ ಸರಕಿನ ಒಟ್ಟಾರೆ ಮೌಲ್ಯ – ಇವೆಲ್ಲಕ್ಕೂ ಹಣದಿಂದ ಹಣಗಳಿಸುವ ತಂತ್ರಗಾರಿಕೆಯೆ ಮೂಲ ಸರಕಲ್ಲವೆ? ಬೇರೆಲ್ಲಾ ತರಹದ ಗಮ್ಯಗಳು (ಗುಣಮಟ್ಟದ ಏರಿಕೆ, ಉತ್ಪಾದನಾವೆಚ್ಚದ ಇಳಿಕೆ, ಕಡಿಮೆ ದರದಲ್ಲಿ ಗುಣಮಟ್ಟದ ಸರಕಿನ ಕೊಂಡುಕೊಳ್ಳುವಿಕೆ, ಗ್ರಾಹಕನ ಸಂತೃಪ್ತಿಯ ಮಟ್ಟ ಏರಿಸುವಿಕೆ, ಉತ್ಪಾದಕತೆ / ದಕ್ಷತೆಗಳ ಹೆಚ್ಚಿಸುವಿಕೆ ಇತ್ಯಾದಿ, ಇತ್ಯಾದಿಗಳು) ಈ ‘ಹಣಗಳಿಕೆಯ’ ಅಂತಿಮ ಗಮ್ಯಕ್ಕೆ ತಲುಪಿಸುವ ತಾತ್ಕಾಲಿಕ ಹೊಣೆಯೊತ್ತ ದಾರಿಹೋಕರಂತಲ್ಲವೆ? ನಾವು ಮಾಡಿದ್ದೆಲ್ಲವು ಸರಿಯೆಂದು ಜಂಬ ಹಿಡಿಯದೆ, ಅದೆಲ್ಲವು ಅಂತಿಮ ಗುರಿಗೆ ಸಂವಾದಿಯಾಗಿದೆಯೆ , ಇಲ್ಲವೆ ಎಂದು ವಿಮರ್ಶಿಸಿ ನೋಡುವ ಅಗತ್ಯವಿಲ್ಲವೆ? ಇಲ್ಲದಿದ್ದಲಿ, ಬದಲಾವಣೆಯ ಧಾಳಿ ಬೀಸಿದ ಗಾಳಿಯಲ್ಲಿ ಒಂದಲ್ಲ ಒಂದು ದಿನ ನಮ್ಮನ್ನು ನಾವೆ ಇಲ್ಲವಾಗಿಸಿಕೊಳ್ಳುವ, ಅಪ್ರಸ್ತುತವೆನಿಸಿಕೊಳ್ಳುವ ಸ್ಥಿತಿಗೆ ನಾವೆ ತಂದಿಟ್ಟುಕೊಂಡಂತಾಗುವುದಿಲ್ಲವೆ? ಅಲ್ಲಿಯತನಕ ಕಾಯದೆ ಸ್ವಪ್ರೇರಣೆಯಿಂದ ಹೊಸಹಾದಿ ಹಿಡಿದರೆ ಬದುಕುವ ದಾರಿ ಸುಗಮವಾಗದೆ? ಅಲ್ಲದೆ, ಈಗಿರುವ ವ್ಯವಸ್ಥೆ ಒಮ್ಮೆಲೆ ಬಿದ್ದುಹೋದರೆ ಏನೇನು ಅನಾಹುತಗಳಾಗಬಹುದೊ, ಅದನ್ನೆಲ್ಲ ತಡೆಗಟ್ಟುವ ಮೂಲೋದ್ದೇಶವೆ ಈ ವಾದದ್ದೂ ಸಹ. ಅಂದ ಮೇಲೆ ಮೂಲ ಆಶಯದ ಮೊತ್ತ ಒಂದೆ ತಾನೆ? ಆ ಆಶಯಕ್ಕೆ ಧಕ್ಕೆ ಬರದಂತೆ ಎರಡು ಬಣದ ವಾದಗಳನ್ನು ಕೈಜೋಡಿಸುವಂತೆ ಮಾಡಿದರೆ ನಯವಾದ, ಸದ್ದುಗದ್ದಲವಿರದ ಸ್ಥಿತ್ಯಂತರ ಸಾಧ್ಯವಿದೆಯಲ್ಲವೆ? ಇದು ನಿರ್ಬಂಧ ವಾದದ ಉವಾಚ.

ಇಷ್ಟಕ್ಕೂ ಈ ‘ತೊಡಕಿನ ವಾದ’ ಹೇಳುವುದಾದರೂ ಏನು? ಈಗ ದೈನಂದಿನ ಜೀವನದಲ್ಲಿ ನಾವೇನೆ ಮಾಡಿದರು ಅದರ ಪರಿಣಾಮ, ಒತ್ತಾಸೆ ಸ್ಥಳೀಯ ಅಂಶಗಳ ಪರಿಗಣನೆಯನ್ನೆ ಮುಖ್ಯ ಗಮ್ಯವನ್ನಾಗಿರಿಸುತ್ತದೆ (ಲೋಕಲ್ ಆಪ್ಟಿಮಾ); ಅದರೆ ಅಂತಿಮ ಗಮ್ಯದ ಸಾಧನೆಗೆ ‘ಈ ಸ್ಥಳಿಯ ಪರಿಗಣನೆ’ ಆ ಅಂತಿಮ ಗಮ್ಯಕೆ ಸಂವಾದಿ ಯಾ ಸಹಪಾಠಿಯಾಗಿ, ಜಾಗತಿಕ ಪರಿಗಣನೆಯ (ಗ್ಲೋಬಲ್ ಆಪ್ಟಿಮಾ) ಜತೆ ‘ಬೆಸುಗೆ ರಹಿತ’ (ಸೀಮ್ ಲೆಸ್) ಹೊಂದಾಣಿಕೆಯಾಗುವುದು ಅತ್ಯಂತ ಮುಖ್ಯವಲ್ಲವೆ? ಇಡಿ ವ್ಯವಸ್ಥೆಯ ಎಲ್ಲಾ ಅಂಗಗಳು ಕೊಂಡಿಯಲ್ಲಿ ಬಂಧಿಸಲ್ಪಟ್ಟ ಸರಪಳಿಯ ಹಾಗೆ ಬರಿ ಮೇಲ್ನೋಟಕ್ಕೆ ಮಾತ್ರ ಕಾಣಿಸಿಕೊಳ್ಳದೆ, ಕಾರ್ಯನಿರ್ವಹಣೆಯಲ್ಲೂ ಅದೆ ರೀತಿಯ ‘ಬಂಧತೆ’ ‘ಬದ್ದತೆ’ಗಳನ್ನು ಪ್ರದರ್ಶಿಸಬೇಕಾದ, ನಿರೂಪಿಸಬೇಕಾದ ಅಗತ್ಯವಿಲ್ಲವೆ? ಅದಕ್ಕೆ, ನಾವು ಮಾಡುವುದೆಲ್ಲ ಅಂತಿಮಾಂತಿಮ ಗುರಿಗೆ, ಮತ್ತದರ ಸಾಧಕ-ಭಾಧಕತೆ ಸಂವಾದಿಯಾಗಿದೆಯೆ ಅಥವಾ ಪ್ರತಿವಾದಿಯಂತಿದೆಯೆ ಪರೀಕ್ಷಿಸಿ ನೋಡಿ, ಯಾವುದು “ಸಾಮಾನ್ಯ ಜ್ಞಾನ”ದ (ಕಾಮನ್ ಸೆನ್ಸ್) ಸುತ್ತಳತೆಯಡಿ ತೇರ್ಗಡೆಯಾಗಲಿದೆ, ಯಾವುದು ಬರಿ ‘ಮಾಡಲೇಬೇಕಾದ ಕಾರ್ಯ ಸಂವಿಧಾನ / ಕಾನೂನಿನನುಸಾರ’ ಕ್ಕೊಸ್ಕರ (ಸ್ಟ್ಯಾಂಡರ್ಡ್ಸ್, ಗೈಡ್ ಲೈನ್ಸ್, ಪಾಲಿಸೀಸ್, ರೂಲ್ಸ್ ಆಂಡ್ ರೆಗ್ಯುಲೇಷನ್ಸ್ ಇತ್ಯಾದಿ) ಮಾಡಲಾಗುತ್ತಿರುವುದರಿಂದ ಆಳವಾದ ಪರಿಶೀಲನೆಯ ಆಗತ್ಯವಿದೆಯೆಂದು ವಿಂಗಡಿಸಿ ವಿಮರ್ಶಿಸುವ ಅಗತ್ಯವಿರುತ್ತದೆ. ಹಾಗೆ ಪರಾಮರ್ಶಿಸುತ್ತಲೆ ಅಗತ್ಯ, ಅವಶ್ಯಕತೆಯಿದ್ದೆಡೆ ಅವನ್ನೆಲ್ಲ ಮಾರ್ಪಾಡಿಸುತ್ತ ‘ಸ್ಥಳೀಯ ಗುರಿಯ’ ಜತೆಗೆ ‘ಅಂತಿಮ ಜಾಗತಿಕ ಗುರಿಗೆ’ ಬೆಸುಗೆರಹಿತ ಸಂವಾದಿಯಾಗುವಂತೆ ನಿರ್ದಿಷ್ಟ ಹಾಗೂ ಸರಳ ರೀತಿಯಲ್ಲಿ, ಜನ ಸಾಮಾನ್ಯನು ಅರ್ಥಮಾಡಿಕೊಳ್ಳಬಲ್ಲ “ಸರಳ ತರ್ಕದ ಸಾಮಾನ್ಯ ಜ್ಞಾನ” ದ (ಸಿಂಪಲ್ ಲಾಜಿಕಲ್ ಕಾಮನ್ಸೆನ್ಸ್ ಅಪ್ಪ್ರೋಚ್) ನೆಲೆಗಟ್ಟಿನಲ್ಲಿ ಕಟ್ಟಿಕೊಡಬೇಕಾಗುತ್ತದೆ. ಇದು ತೊಡಕುವಾದದ ಮೂಲ ಸಿದ್ದಾಂತದ ನೆಲೆಗಟ್ಟು.

ಇದರ ಸತ್ವವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಒಂದು ಉದಾಹಾರಣೆಯ ಮೂಲಕ ಪ್ರಯತ್ನಿಸೋಣ.

ಒಂದು ದೊಡ್ಡ ಕಾರ್ಖಾನೆಯನ್ನು ಕೇವಲ ಐದೇ ಐದು ಯಂತ್ರಗಳಿರುವ ಒಂದೇ ಒಂದು ಉತ್ಪಾದನಾ ಸಾಲಿನ ಪುಟ್ಟ ಮಾಡಲ್ಲಾಗಿ ಊಹಿಸಿಕೊಳ್ಳಿ (ವನ್ ಪ್ರೊಡಕ್ಷನ್ ಲೈನ್ ವಿಥ್ ಫೈವ್ ಮೆಷೀನ್ಸ್). ಇದು ಹೇಗೆ ನಿರ್ಮಾಣ ಮಾಡಲ್ಪಟ್ಟಿದೆಯೆಂದರೆ, ಈ ಐದು ಯಂತ್ರಗಳು ಒಂದು ಇನ್ನೊಂದಕ್ಕೆ ಸರಬರಾಜುದಾರನಂತೆ ವರ್ತಿಸುತ್ತವೆ. ಮೊದಲ ಯಂತ್ರ ಮೂಲ ಕಚ್ಛಾ ಸಾಮಾಗ್ರಿಯನ್ನು (ರಾ ಮೆಟೀರಿಯಲ್ಸ್ – ಉದಾಹರಣೆಗೆ ಉಕ್ಕಿನ ಕೋಲೊಂದನ್ನು ಅಂದುಕೊಳ್ಳಿ) ಆಪೋಷಿಸಿ, ಸಂಸ್ಕರಿಸಿ (ದುಂಡಾಗಿ, ಸಣ್ಣ ಒಂದೆ ಸಮದ ತುಂಡುಗಳಾಗಿ ಕತ್ತರಿಸಲ್ಪಟ್ಟ ಉಕ್ಕಿನ ಕೋಲಂತೆ) ಮುಂದಿನ ಯಂತ್ರಕ್ಕೆ ರವಾನಿಸುತ್ತದೆ. ಎರಡನೆ ಯಂತ್ರ ಪ್ರತಿ ತುಂಡನ್ನು ಕಬಳಿಸಿ , ತರತರದ ಪರಿಕರಗಳನ್ನು ಬಳಸಿ (ಟೂಲ್ಸ್ ಅಂಡ್ ಟೆಕ್ನಿಕ್ಸ್) ಮೊದ್ದುಮೊದ್ದಾಗಿದ್ದ ತುಂಡನ್ನು ಹೊಳಪಾಗಿಸಿ, ಸ್ಥೂಲಕಾಯದಿಂದ ನೀಳಕಾಯವಾಗಿಸಿ, ನಿಖರತರದ ಅಳತೆಗೆ ಒಗ್ಗುವಂತೆ ಜಾಡಿಸಿ, ಮುಂದಿನವನ ಮಡಿಲಿಗೆ ದೂಕುತ್ತದೆ. ಮುಂದಿನವನದಿನ್ನು ಕಠಿಣತರ ಕೆಲಸ – ಒಂದೆ ಬಾಣಲಿಯಲಿ ಬಂದ ಅರೆ-ಪರಿವರ್ತಿತ ಸರಕಲ್ಲಿ (ಸೆಮಿ ಫಿನಿಷ್ಡ್ ಗೂಡ್ಸ್), ಎಲ್ಲಾ ಒಂದೆ ಆಕಾರಕ್ಕೆ ಪರಿವರ್ತಿಸುವಂತಿಲ್ಲ; ಗ್ರಾಹಕನ ಸಿದ್ದ ಸರಕಿನ (ಫಿನಿಷ್ಡ್ ಗೂಡ್ಸ್) ಬೇಡಿಕೆಯಪಟ್ಟಿಯನುಸಾರ ಒಂದಷ್ಟು ‘ಏ’ ಆಕಾರ ಪಡೆದರೆ, ಕೆಲವು ‘ಬಿ’, ‘ಸಿ’, ‘ಡಿ’….ಇತ್ಯಾದಿ. ನೋಡಿ, ಆಗಲೆ ಒಂದಾಗಿ ಬಂದ ಸರಕಿನ ನದಿ ಹಲವು ಕವಲೊಡೆದಾಯ್ತು! ಅದನ್ನೆಲ್ಲ ಸರಿಕ್ರಮದಲ್ಲಿ, ಒಂದರ ಹಿಂದೆ ಒಂದರಂತೆ ಸಂಸ್ಕರಿಸಿ ಮುಂದೆ ತಳ್ಳುವ ಭಾರ ಮೂರನೆಯವನ ಗೋಳು. ನಾಲ್ಕನೆಯವನು ಪಕ್ಕಾ ಜೋಡಣೆದಾರ (ಅಸೆಂಬ್ಲಿ ವಿಭಾಗ); ಹಿಂದಿನವನ ಅರೆ-ಸಿದ್ದ ಸರಕಿನ ಜತೆ ಹೊರಗಿನ ವರ್ತಕನಿಂದ ಸರಬರಾಜಾದ ಮತ್ತಷ್ಟು ಸಾಮಾಗ್ರಿಯನೆಲ್ಲಾ ಒಟ್ಟುಗೂಡಿಸಿ, ಸರಿವಿಧಾನದಲ್ಲಿ ಜೋಡಿಸಿ, ಬಂಧಿಸಿ, ಪರೀಕ್ಷಿಸಿ ನೋಡಿ – ಇಗೊ! ಗ್ರಾಹಕನಿಗೆ ಬೇಕಾದ ಸಿದ್ದ ಸರಕು ಸಿದ್ದ! ಆದರು ಕೆಲಸವಿನ್ನು ಮುಗಿದಿಲ್ಲ – ಕೊನೆಯ ಯಂತ್ರದ ಗಿರಾಕಿ ಇನ್ನೂ ಕಾದೆ ಕುಳಿತಿದ್ಸಾನೆ, ಸಾಗಾಣಿಕೆಯಲ್ಲಿ ಯಾವುದೆ ರೀತಿಯ ವ್ಯತ್ಯಯವಾಗದಂತೆ ಕಾಪಾಡುವ ರಕ್ಷಾಕವಚವನ್ನು (ಪ್ಯಾಕೇಜಿಂಗ್) ಹೊದಿಸಿ ಸುರಕ್ಷಿತವಾಗಿಸುವ ಹೊಣೆಗಾರಿಕೆ ಇವನದಂತೆ. ಇವನ ಕೆಲಸ ಮುಗಿದ ಮೇಲೆ ಅಲ್ಲೊಂದು ದೊಡ್ಡ ಉಗ್ರಾಣದಲ್ಲಿ (ಸ್ಟೋರು / ವೇರ ಹೌಸ್)ಎಲ್ಲಾ ಸಿದ್ದ ಸರಕುಪೇರಿಸಿಡುವ ಜಾಗ. ಅಲ್ಲಿಂದ ಗ್ರಾಹಕನಿಗೆ (ಕೊಳ್ಳುವ ದಾತರು), ಅವನು ಕೇಳಿದ ರೀತಿಯಲ್ಲಿ ಸರಬರಾಜು ಮಾಡುವ ಸಾಗಾಣಿಕಾ ವ್ಯವಸ್ಥೆ. ಇದೆ ರೀತಿ, ಮೊದಲ ಯಂತ್ರದ ಹಿಂದೆಯು ಒಂದು ಉಗ್ರಾಣ – ಅದರದು ಕೊಂಡುತಂದ ಕಚ್ಛಾ ಸಾಮಾಗ್ರಿ ಪೇರಿಸಿಡಲು. ಒಟ್ಟಾರೆ, ಇದು ಪೂರ್ತಿ ವ್ಯವಸ್ಥೆಯ ಒಂದು ಸಾಂಕೇತಿಕ ಚಿತ್ರಣ. ಇದರ ಸುತ್ತ ಉಳಿದೆಲ್ಲ ಸೇವಾ ವಿಭಾಗಗಳು ನೆಂಟಿನ ಗಂಟು ಹಾಕಿಕೊಳ್ಳುತ್ತವೆ – ಕೊಳ್ಳುವ ವಿಭಾಗ (ಪರ್ಚೇಸಿಂಗ್), ಮಾರುವ ವಿಭಾಗ (ಸೇಲ್ಸ್), ಹಣಕಾಸು ಲೆಕ್ಕಾಚಾರದ ವಿಭಾಗ (ಫೈನಾನ್ಸ್), ನಿಯಂತ್ರಣ ವಿಭಾಗ (ಕಂಟ್ರೋಲಿಂಗ್), ಮಾನವ ಸಂಪನ್ಮೂಲ ವಿಭಾಗ (ಹ್ಯೂಮನ್ ರಿಸೋರ್ಸ್), ಲೆಕ್ಕಪತ್ರ ಪರಿಶೋಧನ ವಿಭಾಗ (ಆಡಿಟ್ಟು), ತರತರದ ಕಾರಕೂನ / ಆಡಳೀತಾತ್ಮಕ (ಕ್ಲರಿಕಲ್ / ಅಡ್ಮಿನಿಸ್ಟ್ರೇಟಿವ್ ಸರ್ವೀಸಸ್) ಇತ್ಯಾದಿ. ಸದ್ಯದ ತತ್ವದ ಅರ್ಥಮಾಡಿಕೊಳ್ಳುವ ದೃಷ್ಟಿ ವ್ಯಾಪ್ತಿಯಿಂದ ಈ ಗಂಟುಗಳನ್ನೆಲ್ಲ ತಾತ್ಕಾಲಿಕವಾಗಿ ಹೊರಗಿಡುವ.

ಈ ಮೇಲಿನ ಉದಾಹರಣೆ ಕ್ಲಿಷ್ಟವಾಗಿದ್ದರೆ, ಉಕ್ಕಿನ ಬದಲು ದಾರ ಮಾಡುವ ಮೂಲ ಸಾಮಾಗ್ರಿಯಾದ ಹತ್ತಿಯನ್ನು ಊಹಿಸಿಕೊಳ್ಳಿ. ಹತ್ತಿ ಬಡಿದು ಹಿಂಜುವ ಕೆಲಸಕ್ಕೆ ಮೊದಲ ಯಂತ್ರವಾದರೆ, ದಾರ ನೇಯುವ ಮಗ್ಗಗಳು ಎರಡನೆಯದು. ಬಗೆ ಬಗೆಯ ಬಣ್ಣ ಹಾಕಿ, ಬೇರ್ಪಡಿಸುವ ಗಿರಾಕಿ ಮೂರನೆಯವ (ಬಣ್ಣ ಕವಲೊಡೆಸುತ್ತ ಗ್ರಾಹಕನ ನಿಗದಿಸಿದ ಬೇಡಿಕೆಯನ್ನು ಸೂಚಿಸುತ್ತದೆ); ನಾಲ್ಕನೆಯವನ ಹಣೆಬರಹ ಪ್ರತಿ ಬಣ್ಣದ ದಾರವನ್ನು ಬೇರೆ ಬೇರೆ ಸುರುಳಿ ಕಟ್ಟಿನ ಸುತ್ತ ಸುತ್ತುತ್ತ ನಿಗದಿತ ಗಾತ್ರ, ಆಕಾರದ ಉಂಡೆ ಮಾಡುವುದು. ಐದನೆಯವನದೆ ಯಥಾರೀತಿಯ ಪ್ಯಾಕಿಂಗು; ಸೂಚಿತ ಮಿಶ್ರದ ಅನುಸಾರ ದಾರದುಂಡೆಗಳನ್ನೊಟ್ಟುಗೂಡಿಸಿ, ಒಂದು ಬಾಕ್ಸಿನಲ್ಲಿಡಿಸಿ ಹೊದಿಕೆ ಮುಚ್ಚುವ ಪ್ರವರ. ಯಾವುದನ್ನೆ ಊಹಿಸಿದರೂ ಹೆಚ್ಚುಕಡಿಮೆ ಒಂದೆ ಸಿದ್ದಾಂತದ ಪರಿಕಲ್ಪನೆ.

____________________________________________________________________
ಭಾಗ – 03: ಸಾಂಪ್ರದಾಯಿಕ ಸಿದ್ದಾಂತ (ಟ್ರೇಡಿಶನಲ್ ಅಪ್ಪ್ರೋಚ್) ಮತ್ತು ನಿರ್ಬಂಧ ಸಿದ್ದಾಂತಕ್ಕು ನಡುವಿನ ತುಲನೆ
_____________________________________________________________________

ಈ ಉದಾಹರಣೆಯಡಿ ಸಾಂಪ್ರದಾಯಿಕ ಸಿದ್ದಾಂತ (ಟ್ರೇಡಿಶನಲ್ ಅಪ್ಪ್ರೋಚ್) ಮತ್ತು ನಿರ್ಬಂಧ ಸಿದ್ದಾಂತಕ್ಕು ತುಲನೆ ಮಾಡಿ ನೋಡಿದರೆ, ಆಗ ಇವೆರಡರ ನಡುವಿನ ಸಾಮ್ಯ – ಅಂತರಗಳ ಅರಿವು ಅಂತರ್ಗತವಾದೀತು.

1. ಸಾಂಪ್ರದಾಯಿಕ ಸಿದ್ದಾಂತದಲ್ಲಿ ಪ್ರತಿಯೊಂದು ಯಂತ್ರದ ದುಡಿಮೆ, ಉತ್ಪಾದಕತೆ, ದಕ್ಷತೆ ಗರಿಷ್ಟವಿದ್ದಷ್ಟೂ ಹೆಚ್ಚು ಸರಿ. ಬಂಡವಾಳ ಹಾಕಿ ಕೊಂಡುತಂದ ಯಂತ್ರ ಕೆಲಸ ಮಾಡದೆ ಸುಮ್ಮನೆ ಕೂತರೆ ನಷ್ಟವೆ ಹೆಚ್ಚು. ಅದರ ಮೇಲಿನ ಹೂಡಿಕೆಯ ಲಾಭ ಶೀಘ್ರವಾಗಿ ಹಿಂಬದಷ್ಟೂ ಕ್ಷೇಮ (ರಿಟರ್ನ್ ಆನ್ ಇನ್ವೆಸ್ಟುಮೆಂಟ್). ಪುಸ್ತಕದ ಲೆಕ್ಕದ ಪ್ರಕಾರ ಮೂರು ವರ್ಷ ಬೇಕಾದೀತೆಂದು ಅಂದುಕೊಂಡಿದ್ದರೆ (ಉದಾಹರಣೆಗೆ ಮೂರುವರ್ಷದಲ್ಲಿ ಐವತ್ತು ಲಕ್ಷ ತುಂಡುಗಳ ಉತ್ಪಾದನಾ ಗುರಿ) , ಯಂತ್ರದ ದಕ್ಷತೆ ಹೆಚ್ಚಿಸಿ ಎರಡೆ ವರ್ಷದಲ್ಲಿ ಐವತ್ತು ಲಕ್ಷ ತುಂಡುಗಳ ಗುರಿ ಮುಟ್ಟಿದರೆ – ಅದೊಂದು ಸಕ್ರಮ ಹಾಗೂ ಹಾಡಿ ಹೊಗಳುವ ಪರಾಕ್ರಮ!

ತೊಡಕುವಾದದ ತೊಡಕಿರುವುದು ಅಲ್ಲಿಯೆ..ಯಂತ್ರದ ದಕ್ಷತೆಗಾಗಿ ಬೇಕಾಬಿಟ್ಟಿ ಓಡಿಸಿ ಉತ್ಪಾದಿಸಿದರೆ, ಗ್ರಾಹಕನಿಗೆ ಬೇಡದೇ ಇದ್ದಷ್ಟು ಸಂಖ್ಯೆಯಲ್ಲಿ ಉತ್ಪಾದಿಸಲು ಪ್ರೇರೇಪಿಸಿದಂತಾಗಲಿಲ್ಲವೆ? ಅಲ್ಲದೆ, ಮಾಡಿದ್ದೆಲ್ಲ ಗ್ರಾಹಕನ ಬೇಡಿಕೆಯ ಅನುಗುಣವಾಗಿ ಇರುವುದೆನ್ನಲು ಹೇಗೆ ಸಾಧ್ಯ? ಬೇಡದ್ದನ್ನೆಲ್ಲಾ ಉತ್ಪಾದಿಸಿ ಮಾರಲಾಗದೆ ಸಿದ್ದ ಸಾಮಾಗ್ರಿಗಳ ಉಗ್ರಾಣದಲ್ಲಿ ಕೂಡಿಟ್ಟಂತಾಗುವುದಿಲ್ಲವೆ? ಇನ್ವೆಂಟೊರಿ ಹೆಚ್ಚಿದರೆ ವೆಚ್ಚಗಳು ಹೆಚ್ಚಾದಂತಲ್ಲವೆ? ಸಾಲದ್ದಕ್ಕೆ ಪಾರ್ಶ್ವ ಪರಿಣಾಮಗಳ ಕಥೆಯೇನು? ಉದಾಹರಣೆಗೆ ಸೀಮಿತ ಸಂಖ್ಯೆಯಲಿರುವ ಕಚ್ಚಾಸಾಮಾಗ್ರಿಯನ್ನು ಯಂತ್ರದ ದಕ್ಷತೆ ಹೆಚ್ಚಿಸುವ ಸಲುವಾಗಿ ಅಡ್ಡಾದಿಡ್ಡಿ ಬಳಸಿಬಿಟ್ಟರೆ, ಅದೇ ಮೂಲಸಾಮಾಗ್ರಿ ಬೇಕಿದ್ದ ಮತ್ತೊಂದು ಗ್ರಾಹಕನ ಸಿದ್ದ ಸರಕಿಗೆ ಕೊರತೆಯುಂಟಾಗಿ ಒಂದು ರೀತಿಯ ಸರಣಿ ಪರಿಣಾಮ ಉಂಟು ಮಾಡುವುದಿಲ್ಲವೆ? ಇಡಿ ವ್ಯವಸ್ತೆಯನ್ನೆ ಕಂಗೆಡಿಸಿ , ಕಂಗಾಲಾಗಿಸಿ ಬಿಡುವುದಿಲ್ಲವೆ ಇಂತಹ ವಿಧಾನ? ಇಡಿ ವ್ಯವಸ್ತೆಗೆ ಧಕ್ಕೆ ತರುವ ಬದಲು , ಯಂತ್ರದ ದಕ್ಷತೆಯಲ್ಲಿ ಸಂಧಾನ ಮಾಡಿಕೊಂಡು ಕಡಿಮೆ ಉತ್ಪಾದಕತೆಯನ್ನಪ್ಪಿದರೂ ತಪ್ಪಿಲ್ಲ, ಸರಿಯೆ ಎಂಬುದು ತೊಡಕು ವಾದದ ತಿರುಳು. ಬರಿ ಸಂಖ್ಯೆಯ ಹೆಚ್ಚಳ ಪರಾಕ್ರಮವಲ್ಲ, ಮಹಾಪಾಪವೆಂದು ಆಣೆ ಪ್ರಮಾಣ ಮಾಡುವ ದಾರಿ ಇದರದು.

ಒಟ್ಟಾರೆ ಸ್ಥಳೀಯ ದಕ್ಷತೆ ಮತ್ತು ಜಾಗತಿಕ ಸದಕ್ಷತೆಯ ನಡುವಿನ ವಾಗ್ವಾದ, ಘರ್ಷಣೆ ಇಲ್ಲಿ ಎದ್ದು ಕಾಣುವ ಅಂತರಾಳ.

2. ಸಾಂಪ್ರದಾಯಿಕ ವಿಧಾನದಲ್ಲಿ, ಒಟ್ಟು ಮಾರುಕಟ್ಟೆಯ ಬೇಡಿಕೆಯ ಲೆಕ್ಕಾಚಾರದಿಂದ ಪ್ರೇರಿತವಾದ ಉತ್ಪಾದನಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಸರಳವಾಗಿ ಹೇಳುವುದಾದರೆ ನೀವು, ನಾವು ನಮ್ಮಂತಹವರು ಕೊಳ್ಳಬಹುದಾದ ಒಟ್ಟು ದಾರದುಂಡೆಗಳನ್ನು ಸೇಲ್ಸ್ ಅಂಡ್ ಮಾರ್ಕೆಟಿಂಗಿನ ಸಹಯೋಗದಲ್ಲಿ ಸ್ಥೂಲವಾಗಿ ಮೊದಲು ಅಂದಾಜು ಮಾಡುತ್ತಾರೆ. ಅದನ್ನು ಕಂಪನಿಯ ಆರ್ಥಿಕ ಗುರಿ, ಗಮ್ಯದ ಅಂದಾಜಿನ ಜತೆ ತಾಳೆ ಹಾಕಿ ಒಂದು ಅಂಗೀಕೃತ ಮೊತ್ತ, ಮಾರಾಟ ಸಂಖ್ಯೆಯನ್ನು ನಿರ್ಧರಿಸುತ್ತಾರೆ. ಈ ಗಣಕವನ್ನು ಅಡಿಯಟ್ಟೆಯನ್ನಾಗಿ (ಬೇಸಿಸ್) ಇಟ್ಟುಕೊಂಡು, ವಿವರವಾದ ನೀಲ ನಕ್ಷೆಯ ಸಿದ್ದತೆ ನಡೆಯುತ್ತದೆ, ಆಳದ ಸ್ತರದಲ್ಲಿ – ಅಂತಿಮ ಗುರಿಯ ಮೊತ್ತವನ್ನು ವಿಧವಿಧ ಬಣ್ಣಾ, ಗಾತ್ರದಲ್ಲಿ ವಿಂಗಡಿಸಿ ಲೆಕ್ಕ ಹಾಕುತ್ತ. ಅದರ ಅಡಿಯಟ್ಟೆಯಲ್ಲಿ ಮುಂದಿನ ಹಂತದ ಸರಕುಗಳ ಲೆಕ್ಕಾಚಾರ, ಅಂದಾಜು ನಡೆಯುತ್ತ ಹೋಗುತ್ತದೆ – ಅಂತಿಮ ಹಂತ, ಮಟ್ಟವನ್ನು ಮುಟ್ಟುವ ತನಕ. ಹೀಗೆ ತಯಾರಾದ ಅಂದಾಜು ಸೌಧವೆ, ಕಂಪನಿಯ ಎಲ್ಲಾ ರೀತಿಯ ನಿರ್ಧಾರ, ಕಾರ್ಯಾಚರಣೆ, ನಡುವಳಿಕೆಗಳ ಸರದಾರನಾಗುತ್ತದೆ, ಆರ್ಥಿಕ ಸ್ಥಿತಿ ಹದಗೆಡದೆ ಸರಿಸುಮಾರು ಒಂದೆ ಗತಿಯಲ್ಲಿ ಮುನ್ನಡೆದರೆ. ಒಂದು ವೇಳೆ ಕೆಟ್ಟರೆ, ಎಲ್ಲಾ ಲೆಕ್ಕಾಚಾರದ ಪುನಾರಾವರ್ತನೆ ಇಳಿಸಿದ ಗುರಿಗಳೊಡನೆ. ಮಾರುಕಟ್ಟೆ ಏರುಗತಿ ಹತ್ತಿದರೆ ಪುನರ್ಲೆಕ್ಕಾಚಾರ ಸಹ ಏರಿಸಿದ ಹಾದಿಯಲ್ಲೆ. ಉತ್ಪಾದನೆಯು ಇದಕ್ಕೆ ಹೊರತಲ್ಲ – ಇದೆ ಆಧಾರವನ್ನಿಟ್ಟುಕೊಂಡೆ ಸೇಲ್ಸ್ ಆಂಡ್ ಪ್ರೊಡಕ್ಷನ್ ಪ್ಲಾನ್ ಕೆಲಸ ಮಾಡುತ್ತದೆ. ಇದರಿಂದ ನಿಜವಾದ ಗ್ರಾಹಕ ಬೇಡಿಕೆಗು ಉತ್ಪಾದನೆಗು ಒಂದು ಬಗೆಯ ಕಂದಕ ಸದಾ ಇದ್ದರೂ, ಸರಾಸರಿಯಲ್ಲಿ ಈ ಕಂದಕ ಮುಚ್ಚಿಕೊಳ್ಳುವುದೆಂಬ ಅಭಿಪ್ರಾಯ ಸಾಂಪ್ರದಾಯಿಕ ಸಿದ್ದಾಂತದ ಹರವು.

ತೊಡಕು ಸಿದ್ದಾಂತಿಗಳು ಇಲ್ಲಿ ಮುಂದಿಡುವ ವಾದ ವಾಸ್ತವಿಕತೆಯ ಬೆನ್ನು ಹತ್ತಿದ ಎಳೆ. ಯಾವುದೆ ಕಾರ್ಖಾನೆಯಲ್ಲಾಗಲಿ, ಉತ್ಪಾದನಾ ಸಾಲಿನಲ್ಲಾಗಲಿ “ಸಂಪೂರ್ಣ ಸಮತೋಲನದ ಸಾಧನೆ” ಅಸಂಭವನೀಯ. ಎಲ್ಲಾದರೂ , ಏನಾದರೂ ತೊಡಕುಗಳು ಇದ್ದೆ ಇರುತ್ತವೆ. ಉತ್ಪಾದನೆಗೆ ಆಧಾರ ಆ ತೊಡಕಾಗಿರಬೇಕೆ ಹೊರತು ಮಾರುಕಟ್ಟೆಯ ಸಂಖ್ಯೆಗಳಲ್ಲ. ಮಾರುಕಟ್ಟೆ ಬೇಡಿಕೆ ಅಂದಾಜು ಐನೂರಿದ್ದರೂ, ನಮ್ಮ ‘ವಾಸ್ತವಿಕ’ ಉತ್ಪಾದನಾ ಸಾಮರ್ಥ್ಯ ಮುನ್ನೂರಿದ್ದರೆ, ಐನೂರಕ್ಕೆ ಕಚ್ಛಾ ಸಾಮಾಗ್ರಿ ತರಿಸುವ ಬದಲು ಮುನ್ನೂರಕ್ಕೆ ತರಿಸುವುದು ತಾರ್ಕಿಕ ಮತ್ತು ‘ಕಾಮನ್ ಸೆನ್ಸ್’ ಅಲ್ಲವೆ ಎನ್ನುತ್ತಾರೆ.

ಇದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮೇಲಿನ ಐದು ಯಂತ್ರ ಸಾಲಿನ ಉದಾಹರಣೆಯನ್ನೆ ಮತ್ತೊಮ್ಮೆ ನೋಡೋಣ. ಈ ಐದರಲ್ಲಿ ಪ್ರತಿಯೊಂದರ ಸಾಮರ್ಥ್ಯ ದಿನಕ್ಕೆ ಕನಿಷ್ಟ (ಮಿನಿಮಂ) ಐನೂರಿತ್ತೆಂದುಕೊಳ್ಳಿ, ನಾಲ್ಕನೆಯದೊಂದನ್ನು ಬಿಟ್ಟು. ಈಗ ನಾಲ್ಕನೆಯದರ ಗರಿಷ್ಟ (ಮ್ಯಾಕ್ಸಿಮಂ) ಸಾಮರ್ಥ್ಯ ಬರಿ ಮುನ್ನೂರಿತ್ತೆಂದು ಭಾವಿಸಿ. ಇಂಥ ವ್ಯವಸ್ಥೆಯಲ್ಲಿ, ನಾವೇನೆ ಮಾಡಿದರೂ ಕೊನೆಗೆ ಮಾರಟವಾಗಬಲ್ಲ ಸಿದ್ದಸರಕನ್ನು ಮುನ್ನೂರಕ್ಕಷ್ಟೆ ಸೀಮಿತಗೊಳಿಸಲು ಸಾಧ್ಯ. ಮೂರನೆ ಮೇಷಿನ್ನಿನವರೆಗೆ ಐನೂರನ್ನು ಉತ್ಪಾದಿಸಿದರೂ, ನಾಲ್ಕನೆ ಯಂತ್ರದಿಂದಾಚೆಗೆ ಮುನ್ನೂರನ್ನು ದಾಟಲಾಗದು. ಅಂದರೆ ಅಲ್ಲಿಯತನಕ ಮಾಡಿಟ್ಟ ಹೆಚ್ಚುವರಿ ಇನ್ನೂರು ಬಳಸಲಾಗದೆ ಹಾಗೆ ಉಳಿದುಹೋಗುತ್ತದೆ, ಬೇಡದ ಇನ್ವೆಂಟರಿಯ ರೂಪದಲ್ಲಿ (ಅಥವಾ ಕಚ್ಛಾ ಸರಕಿನ ರೂಪದಲ್ಲಿ). ಇದು ಬೇಕಾ? ಬದಲು , ಯೊಜನೆಯೆಲ್ಲ ಗರಿಷ್ಟ ಸಾಮರ್ಥ್ಯವಾದ ಮುನ್ನೂರಕ್ಕೆ ಸೀಮಿತಗೊಳಿಸಿದರೆ, ಹಣಕಾಸು ನಿಭಾವಣೆ ಹೆಚ್ಚು ದಕ್ಷ ; ಹೇಗೂ, ಮಾಡಲಾಗುವ ಸಾಮರ್ಥ್ಯ ಮುನ್ನೂರೆಂಬುದು ವಾಸ್ತವ ತಾನೆ ? ಎಂಬ ಲಹರಿ ತೊಡಕರಿತ ತೊಡಕು ವಾದದ್ದು.

3. ತೊಡಕಪ್ಪರ ಮತ್ತೊಂದು ಪ್ರಮುಖ ಅಸ್ತ್ರ ” ಬಾಟಲ್ ನೆಕ್ ಅಪ್ರೋಚ್” ಅಥವ ‘ಕಿರುಕತ್ತಿನ ಬಾಟಲಿಯ ವಿಧಾನ’ (‘ಇಕ್ಕಟ್ಟು ಕತ್ತಿನ ಶೀಷಾ’ ವಿಧಾನ, ‘ಕಿವುಚು ಕತ್ತು ಬಾಟಲಿಯ’ ವಿಧಾನ, ‘ತೊಡಕ ಕತ್ತಿನ ಶೀಷಾ’ ವಿಧಾನ – ಹೀಗೆ ಯಾವುದು ಸೂಕ್ತವೊ, ಅದನ್ನಾಯ್ದುಕೊಳ್ಳಿ, ತತ್ವ ಅರ್ಥವಾದರೆ ಸರಿ!).

ಹಿಂದಿನ ಉದಾಹರಣೆಯ ನಾಲ್ಕನೆ ಯಂತ್ರ ನೆನಪಿದೆಯಲ್ಲಾ? ಅದೇ ಮುನ್ನೂರರ ಆಸಾಮಿ? ತೊಡಕುವಾದದ ಶಾಸ್ತ್ರಿಗಳು ಈ ಆಸಾಮಿಗಿಟ್ಟ ಸುಂದರ ನಾಮಧೇಯವೆ ‘ಬಾಟಲ್ ನೆಕ್’ (‘ತೊಡಕ ಕತ್ತು’, ‘ಕಿವುಚು ಕತ್ತು’, ‘ಇಕ್ಕಟ್ಟಿನ ಕತ್ತು’ ಇತ್ಯಾದಿ!). ಇಡಿ ವ್ಯವಸ್ತೆಯಲಿರುವ ಎಲ್ಲಾ ಬಾಟಲ್ ನೆಕ್ ಗಳನ್ನು ಮೊದಲು ಹುಡುಕಿಡಬೇಕಂತೆ; ಆಮೇಲೆ ವ್ಯವಸ್ತೆಯಲ್ಲಿನ ಎಲ್ಲ ಚಟುವಟಿಕೆಗಳನ್ನು ಇದರ ಅಡಿಯಾಳಾಗಿಸಬೇಕಂತೆ; ತದ ನಂತರ ಇದರ ಬಾಯಿಂದ ಪುಂಗಿನಾದ ಹೊರಡಿಸುತ್ತ ಇದರ ಹೆಡೆಯಾಡಿದಂತೆ, ಇಡಿ ವ್ಯವಸ್ಥೆಯನ್ನು ಓಲಾಡಿಸುತಾ, ತೂಗಾಡಿಸುತ್ತಾ ಸಾಗಬೇಕಂತೆ – ಇದು ಹುಚ್ಚಾಟವಾಗುವುದಿಲ್ಲವೆ ಎಂದು ಸಂಪ್ರದಾಯದ ಶಾಸ್ತ್ರಿಗಳು ಲೇವಡಿ ಮಾಡಿದರೂ, ತೊಡ’ಕ’ತ್ತಿಲ್ಲದೆ, ತಾಕತ್ತಾದರೂ ಹೇಗೆ ವ್ಯವಸ್ಥೆಗೆ ಎಂದು ಮರುಧಾಳಿಸುತ್ತಾ ತೊಡಕು ಶಾಸ್ತ್ರಿಗಳ ಉದ್ಗಾರ. ಅದರ ಸುತ್ತಲೆ, ನೂರೆಂಟು ಹೊಸ ನಿಯಮ, ಕಾನೂನು ಬೇರೆ ಮಾಡಿಕೊಂಡು ಕುಳಿತುಬಿಟ್ಟಿವೆ, ಪಟ್ಟು ಹಿಡಿದಂತೆ.

ಆದರೆ ಸಾಂಪ್ರದಾಯಿಕ ಶೈಲಿಗೆ ಎಡಕತ್ತು, ಬಲಕತ್ತು, ತೊಡ’ಕ’ತ್ತು – ಎಲ್ಲಾ ಒಂದೆ. ಎತ್ತು ಈಯಿತು ಎಂದರೆ, ‘ಸರಿ, ಕೊಟ್ಟಿಗೆಗೆ ಕಟ್ಟು’ ಅನ್ನುವ ಹಾಗೆ. ಕತ್ತುಗಳಿರಲಿ, ಬಿಡಲಿ ನಮ್ಮ ಹಾದಿ, ಶೈಲಿ ಆಗಲೆ ಸುಂದರ ರಂಗವಲ್ಲಿಯಂತೆ ಚೆಲ್ಲಿ ಆಗಿದೆ – ಎನ್ನುವ ಹೆಮ್ಮೆ, ಉಢಾಫೆ. ಹೀಗಾಗಿ ಎರಡು ಸಿದ್ದಾಂತಗಳದು ವಿಭಿನ್ನವಾದ ವ್ಯತ್ಯಾಸದ ಹಾದಿ, ಅಂತಿಮ ಗಮ್ಯ ಒಂದೆ ಆದರೂ!

4. ಈಗಾಗಲೆ ಕೆಲವೆಡೆ ಸ್ಪಷ್ಟಪಡಿಸಿದಂತೆ ಸ್ಥಳೀಯ ದಕ್ಷತೆ ಮತ್ತು ಜಾಗತಿಕ (ಅಥವಾ ಪರಿಪೂರ್ಣ ದಕ್ಷತೆಗಳು) – ಇವೆರಡು ಶೈಲಿಗಳನ್ನು ಬೇರ್ಪಡಿಸುವ ಮತ್ತೊಂದು ಅಂಶ. ಸಾಂಪ್ರದಾಯಿಕ ವಾದ, ಸ್ಥಳೀಯದ ಬೆನ್ಹಿಡಿದರೆ, ತೊಡಕ ಸಿದ್ದಾಂತ ಸ್ಥಳೀಯ ದಕ್ಷತೆಯನ್ನು ತ್ಯಜಿಸಿಯಾದರೂ ‘ಜಾಗತಿಕ ಪರಿಪೂರ್ಣತೆ’ ಯತ್ತ ಕಣ್ಣು ಹಾಕುತ್ತದೆ.

5. ನಿರ್ಬಂಧ ಶಾಸ್ತ್ರ ತಾರ್ಕಿಕದ ಅಡಿಯ “ಸಾಮಾನ್ಯ ಪ್ರಜ್ಞೆ ಯಾ ಸಾಮಾನ್ಯ ಜ್ಞಾನ” (ಕಾಮನ್ ಸೆನ್ಸ್) ಅನ್ನು ಪ್ರತಿಪಾದಿಸಿದರೆ, ಸಾಂಪ್ರದಾಯಿಕ ಶೈಲಿ “ಸಾಮಾನ್ಯ ಪದ್ದತಿ” (ಕಾಮನ್ ಪ್ರಾಕ್ಟೀಸ್) ಯಾ ಪಾರಾಂಪರಿಕವಾಗಿ ಅನುಸರಿಸಿಕೊಂಡು ಬಂದ “ಪ್ರೂವನ್ ಮೆತೆಡ್ಸ್” ಗಳ ಮೊರೆ ಹೋಗುತ್ತದೆ -ಕಾರ್ಯ ಚಟುವಟಿಕೆಗಳಿಂದ ಹಿಡಿದು ಅಳತೆಯ ಮಾನದಂಡದವರೆಗೆ (ಮೆಶರ್ಮೆಂಟ್ಸ್)

6. ಈಗಿನ ಎಷ್ಟೊ ಕುತ್ತು, ಕುಂದು ಕೊರತೆಗಳಿಗೆ ಮುಖ್ಯ ಕಾರಣ – ಈ ಅಳತೆಯ ಮಾನದಂಡಗಳೆ (ಕೆ.ಪಿ.ಐ). ಅವುಗಳನ್ನು ಸಾಧಿಸುವ ಸಲುವಾಗಿಯೆ ಮಾಡುವ ಎಷ್ಟೊ ಚಟುವಟಿಕೆಗಳು ಸ್ಥಳೀಯ ದಕ್ಷತೆಯನ್ನು ಪ್ರೋತ್ಸಾಹಿಸಿ, ಅಂತಿಮ ಗುರಿಗೆ ಅರಿವಿಲ್ಲದೆಯೆ ಸ್ವತಃ ತೊಡ’ಕ’ತ್ತಾಗುವ ಪ್ರಸಂಗಗಳು ಹೇರಳವಾಗಿ ನಡೆಯುತ್ತವೆ ಎಂದ ‘ಅಡೆತಡೆ ವಾದಕ್ಕೆ’, ಇಡಿ ಪ್ರಪಂಚವೆ ಕಣ್ಮುಚ್ಚಿ ಪಾಲಿಸುವ ನಿಯಮಗಳು ಅಷ್ಟೊಂದು ಮೂರ್ಖವಿರಲು ಸಾಧ್ಯವೆ ಇಲ್ಲ – ನಿಮ್ಮದೆಲ್ಲಾ ಬರಿಯ ಭ್ರಮೆ, ಎನ್ನುತ್ತದೆ ಸಾಂಪ್ರದಾಯಿಕ ಶೈಲಿ.

7. ಕೈಗಾರಿಕಾ ಕ್ರಾಂತಿಯ ಸರಕಾಗಿ ಬಂದ ಸಾಂಪ್ರದಾಯಿಕ ನಡೆ-ನುಡಿಗಳು, ಕೇವಲ ಕೈಗಾರಿಕಾ ಕ್ಷೇತ್ರದಲ್ಲಷ್ಟೆ ಬಳಸಬಹುದಾದ ‘ದರ್ಜೀ ಹೊಲಿದಿಟ್ಟ ಸಿದ್ದ ದಿರುಸು / ಬಟ್ಟೆ’. ಬೇರೆಲ್ಲೂ ಅದರ ಬಳಕೆ ಸಾಧ್ಯವಿಲ್ಲ. ಆದರೆ ತೊಡಕ ವಾದ ಹಾಗಲ್ಲ; ಇದೊಂದು ತತ್ವ ಸರಣಿ, ಸಿದ್ದಾಂತ. ಕೈಗಾರಿಕೆ, ವಾಣಿಜ್ಯ ಜಗ, ಕಾರ್ಖಾನೆ, ಕಛೇರಿ, ಜೈವಿಕಾಜೈವಿಕ ಪರಿಸ್ಥಿತಿ / ಪರಿಸರಗಳು, ಕೊನೆಗೆ – ಸ್ವಂತ ಅಥವ ಪರಕೀಯರ ವೈಯುಕ್ತಿಕ ಜೀವನದ ಸಮಸ್ಯೆಗಳನ್ನು ಬಿಡಿಸಬೇಕಾದ ಸಂದರ್ಭಕ್ಕೂ ಇದು ‘ಸೈ’. ಮೊತ್ತದಲ್ಲಿ, ಎಲ್ಲೆಲ್ಲಿ ತೊಡಕುಗಳಿವೆಯೊ (ಕನ್ಸ್ ಟ್ರೇಂಟ್ಸ್), ಅಲ್ಲೆಲ್ಲಾ ಈ ತತ್ವ ಸಿದ್ದಾಂತದ ಬಳಕೆ ಸಾಧ್ಯ ಎನ್ನುತ್ತವೆ ನಿರ್ಬಂಧ ಸಿದ್ದಾಂತದ ಪಠ್ಯ ಪುಸ್ತಿಕೆಗಳು. ಹೀಗಾಗಿ, ಈ ತತ್ವ ಸಿದ್ದಾಂತದ ವ್ಯಾಪ್ತಿ, ಅಗಲ, ಆಳ, ಅರಿವು ವಿಶಾಲವಾದದ್ದು ಮತ್ತು ಸೀಮಾತೀತವಾದದ್ದು ಎಂದಿದರ ಅಂಬೋಣ . ಉದಾಹರಣೆಗೆ, ಗಂಡ ಹೆಂಡಿರ ನಡುವೆ ಸಂಸಾರದಲೇನೊ ತೊಡಕಿದ್ದು, ಬಿರುಕೆದ್ದರೆ ಅದನ್ನು ಮುಚ್ಚಲು, ಮತ್ತು ಮತ್ತೆ ಏಳದಂತೆ ನೋಡಿಕೊಳ್ಳಲು, ಯಾಂತ್ರಿಕ ಜಗದಲ್ಲಿ ಬರಡಾಗುತ್ತಿರುವ ತಂದೆ, ತಾಯಿ , ಮಕ್ಕಳ ಸಂಬಂಧ ಹಳಸದಂತೆ ನೋಡಿಕೊಳ್ಳಲು, ನಾಯಕ – ಹಿಂಬಾಲಕರ ನಡುವೆ ಮಧುರ ಭಾಂಧವ್ಯ ಬೆಳೆಸಲು, ಬಾಸು – ಸಹೋದ್ಯೋಗಿಗಳ ನಡುವೆ ಸೌಹಾರ್ದಯುತ ವಾತಾವರಣವೇರ್ಪಡುವಂತೆ ಮಾಡಲು, ಕೊನೆಗೆ ಬಾಸುಗಳ ಮೇಲೆ ಧನಾತ್ಮಕ ಪ್ರಭಾವ ಬೀರಲೂ ಉಪಯೋಗಿಸಬಹುದಂತೆ! ಭಲೆ…! ಎಲ್ಲಾ ತೊಡ’ಕ’ತ್ತಿನ ಮಹಿಮೆ ಎನ್ನೋಣವೆ?

_____________________________________________________________________
ಭಾಗ – 04: ನಿರ್ಬಂಧ ಸಿದ್ದಾಂತದ ಕೆಲವು ಮೂಲ ತತ್ವಗಳು ಮತ್ತು ಸರಳ ವಿವರಣೆಗಳು:
_____________________________________________________________________

ಈ ವಿಭಾಗದಲ್ಲಿ, ಈ ಸಿದ್ದಾಂತದ ಕೆಲವು ‘ಜಾರ್ಗನ್ನು’ಗಳನ್ನು ಮತ್ತು ತತ್ವದ ಮೂಲಭೂತ ಅಂಶಗಳ ಸರಳ ವಿವರಣೆಯನ್ನು ನೀಡಲು ಯತ್ನಿಸುತ್ತೇನೆ. ಮೊದಲೆ ಹೇಳಿದ್ದಂತೆ, ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇದನ್ನೂ ಮಾರ್ಗಸೂಚಿಯಂತೆ ಪರಿಗಣಿಸಿ ಸೂಕ್ತ ಮೂಲದಲ್ಲಿ ಹುಡುಕಿಕೊಳ್ಳಬಹುದು (ಅಂತರ್ಜಾಲವೂ ಸೇರಿದಂತೆ)

ಘಟನೆ ಮತ್ತು ಘಟನಾವಳಿಯ ಮೇಲೆ ಪ್ರಭಾವ ಬೀರುವ ಎರಡು ಪ್ರಮುಖ ಅಂಶಗಳು
———————————————————————
(ತೊಡಕ ಸಿದ್ದಾಂತದ ಅನುಸಾರ)

1. ಅಂಕಿ-ಅಂಶ ತತ್ವಾಧಾರಿತ ಏರಿಳಿತಗಳ ಗಣನೆ (ಯಾ ಅಂಕಿ-ಅಂಶಾಧಾರಿತ ಕಂಪನಗಳ ಗಣನೆ – ಸ್ಟಾಟಿಸ್ಟಿಕಲ್ ಫ್ಲಕ್ಚುಯೇಶನ್)

ಸರಳವಾಗಿ ಹೇಳುವುದಾದರೆ ಒಂದು ವ್ಯವಸ್ಥೆಯ (ಸಿಸ್ಟಂ) ಒಟ್ಟಾರೆ ಹೊರ ಹರಿವು ಸರಾಸರಿಯಲಿ ಒಂದೆ ಮಟ್ಟದಲಿರುವಂತೆ ಅನಿಸಿದರೂ, ನೈಜ್ಯದಲ್ಲಿ ಸಂಭವಿಸುವ ಘಟನಾಮಟ್ಟದ ಏರಿಳಿತಗಳಿಂದಾಗಿ ಒಟ್ಟು ವ್ಯವಸ್ಥೆಯ ಸರಾಸರಿ ಅದಿರಬೇಕಾದ ನಿರ್ದಿಷ್ಟ ಮಟ್ಟದಲ್ಲಿರದು, ಕಡಿಮೆಯಿರುವ ಸಾಧ್ಯತೆಗಳೆ ಹೆಚ್ಚು ಎನ್ನುವುದು. ಉದಾಹರಣೆಗೆ, ಐದು ಯಂತ್ರಗಳ ಸರಾಸರಿ ಸಾಮರ್ಥ್ಯ ದಿನಕ್ಕೆ ಐದು ನೂರು ಎಂದುಕೊಳ್ಳಿ. ಅಂದರೆ, ಒಟ್ಟಾರೆ ವ್ಯವಸ್ಥೆಯ ಸಾಮರ್ಥ್ಯವು ಕನಿಷ್ಟ ಐನೂರಿರಬೇಕೆಂದಾಯ್ತಲ್ಲವೆ? ಆದರೆ ನೈಜ್ಯತೆಯಲ್ಲಿ, ಮೊದಲ ಯಂತ್ರಕ್ಕೆ ಕಚ್ಛಾವಸ್ತು ಸಮಯಕ್ಕೆ ಸರಿಯಾಗಿ ಬರದೆ, ತಡವಾಗಿ ಕೇವಲ ನಾನೂರು ಮಾತ್ರ ಮುಗಿಸಲು ಸಾಧ್ಯವಾಯ್ತೆಂದುಕೊಳ್ಳಿ. ಆಗ ಇಡಿ ವ್ಯವಸ್ತೆಯ ಸಾಮರ್ಥ್ಯ ನಾನೂರಕ್ಕೆ ಇಳಿದುಬಿಡುತ್ತದೆ. ಎರಡನೆ ಯಂತ್ರವು ಯಾವುದೊ ಕಾರಣಕ್ಕೆ (ಉದಾಹರಣೆ ಹೊಸ ಕೆಲಸಗಾರ) , ಮುನ್ನೂರನ್ನು ಮುಗಿಸಲು ಮಾತ್ರ ಶಕ್ತವಾಯ್ತೆಂದುಕೊಳ್ಳಿ – ಆಗ ಇಡಿ ವ್ಯವಸ್ಥೆಯೆ ಮುನ್ನೂರಕ್ಕೆ ಕುಗ್ಗಿ ಬಿಡುತ್ತದೆ. ಕೆಲವೊಮ್ಮೆ ಒಂದು ಯಂತ್ರದ ಸಾಮರ್ಥ್ಯ ಆರ್ನೂರಕ್ಕೆ ಹೆಚ್ಚಿದರು (ಉದಾ: ಓವರು ಟೈಮ್), ಉಳಿದೆಲ್ಲವೂ ಅದೇಮಟ್ಟದಲ್ಲಿ ದುಡಿಯಲಾಗದಿದ್ದರೆ, ವ್ಯವಸ್ಥೆಯ ಒಟ್ಟಾರೆ ಕಾರ್ಯಕ್ಷಮತೆಗೆ ಸಹಕಾರಿಯಾಗುವುದಿಲ್ಲ ಎಂಬುದು ಈ ಅಂಶದ ಸಾರ.

2. ಪರಾವಲಂಬಿತ ಘಟನಾತ್ಮಕತೆಯ ಗಣನೆ (ಡಿಪೆಂಡೆಂಟ್ ಈವೆಂಟ್ಸ್ ಮತ್ತವುಗಳ ಗಣನೆ ಹಾಗೂ ಪರಿಣಾಮ / ಪರಿಮಾಣ)

ಇದನ್ನು ಈ ಹಿಂದಿನ ಅಂಶದಲ್ಲೆ ಸೂಕ್ಷ್ಮವಾಗಿ ಹೇಳಿದೆ. ಐದು ಯಂತ್ರಗಳ ಸಾಲಿನಲ್ಲಿ, ಐದನೆಯದರ ಕಾರ್ಯ ಕ್ಷಮತೆಯನ್ನು, ನಾಲ್ಕನೆಯ ಯಂತ್ರ ನಿರ್ಧರಿಸುತ್ತದೆ, ನಾಲ್ಕರ ಹಣೆಬರಹ, ಮೂರನೆಯದರ ಕೈಲಿ, ಮೂರನೆಯದರ ಜುಟ್ಟು ಎರಡನೆಯದರ ಕೈಲಿ, ಎರಡರ ಪ್ರತಿಷ್ಟೆ, ಮೊದಲಿನದರಕೈಲಿ – ಹೀಗೆ, ಸರಪಳಿಯ ಬಂಧನ ಪರಸ್ಪರ ಅವಲಂಬನೆಯನ್ನು ಸೃಷ್ಟಿಸಿ ಒಟ್ಟಾರೆ ಹೊರ ಹರಿವಿನ ಮೇಲೆ ಪ್ರಭಾವ ಬೀರುತ್ತದೆಯೆಂಬ ಮೊತ್ತಾತ್ಮಕ ಸಾರಾಂಶ. ಇವು ಹೆಚ್ಚಿದ್ದಷ್ಟು, ಹೆಚ್ಚು ನಷ್ಟ, ಅಪಾಯ, ಪ್ರಕ್ಷುಬ್ದತೆ.

ಇವೆರಡು ಅಂಶಗಳು ಯಾವಾಗಲೂ ಕಾರ್ಖಾನೆಯ ವಾತಾವರಣದಲ್ಲಿ ಪ್ರಭಾವ ಬೀರುತ್ತಲೆ ಇರುತ್ತವೆ. ಆದರೆ, ಸಾಂಪ್ರದಾಯಿಕ ವಿಧಾನದಲ್ಲಿ, ಇವುಗಳನ್ನೆಲ್ಲ ಪರಿಗಣಿಸಿ ಯೋಜನೆ ತಯಾರಾಗುವುದಿಲ್ಲ. ತೊಡಕು ಸಿದ್ದಾಂತದಲಿ, ಇದರ ಗಣನೀಯ ಪರಿಣಾಮವನ್ನು ಪರಿಗಣಿಸಿ, ಅದನ್ನು ಕುಗ್ಗಿಸುವ ಯತ್ನ ಮಾಡಲಾಗುತ್ತದೆ.

ನಿರ್ಬಂಧ ಸಿದ್ದಾಂತದ ಮೂರು ಮುಖ್ಯ ಅಳತೆಯ ಮಾನದಂಡಗಳು:
———————————————————————

1. ಕಾಂಚಾಣೋತ್ಪಾದನಾ ವೇಗ (ಥ್ರೂ – ಪುಟ್)

ಒಂದು ವ್ಯವಸ್ತೆಯಲ್ಲಿ ಸಿದ್ದವಸ್ತುಗಳ ಮಾರಾಟದಿಂದ ಹಣ ಉತ್ಪನ್ನವಾಗುವ ವೇಗ (ರೇಟ್ ಅಟ್ ವಿಚ್ ದಿ ಸಿಸ್ಟಂ ಜನರೇಟ್ಸ್ ಮನಿ ಥ್ರೂ ಸೇಲ್ಸ್).

2. ಮಾರಾಟವಾಗಬಲ್ಲ ಬಂಡವಾಳ (ಇನ್ವೆಂಟರಿ)

ಮಾರುವಾಶಯದಿಂದ ಕೊಂಡು ತಂದ ಸರಕುಗಳ ಮೇಲೆ ವ್ಯವಸ್ತೆ ಹೂಡಿದ ಹಣದ ಬಂಡವಾಳ ( ಆಲ್ ದಿ ಮನಿ ದಟ್ ದಿ ಸಿಸ್ಟಂ ಹ್ಯಾಸ್ ಇನ್ವೆಸ್ಟೆಡ್ ಇನ್ ಪರ್ಚೇಸಿಂಗ್ ಥಿಂಗ್ಸ್ ವಿಚ್ ಇಟ್ ಇಂಟೆಂಡ್ಸ್ ಟು ಸೆಲ್)

3. ಪರಿವರ್ತನಾ ಕಾಂಚಣ ( ಆಪರೇಟಿಂಗ್ ಎಕ್ಸ್ ಪೆನ್ಸಸ್ )

‘ಮಾರಾಟವಾಗಬಲ್ಲ ಬಂಡವಾಳವನ್ನು’ (ಸಂಸ್ಕರಿಸಿ) ‘ಕಾಂಚಾಣೋತ್ಪಾದನಾ ವೇಗ’ ವಾಗಿ ಪರಿವರ್ತಿಸಲು ವ್ಯವಸ್ತೆ ಚೆಲ್ಲುವ / ಚೆಲ್ಲಬೇಕಾದ ಎಲ್ಲಾತರದ ಹಣ (ಆಲ್ ದ ಮನಿ ದ ಸಿಸ್ಟಂ ಸ್ಪೆಂಡ್ಸ್ ಇನ್ ಆರ್ಡರ ಟು ಟರ್ನ್ ಇನ್ವೆಂಟರಿ ಇಂಟೂ ಥ್ರೂಪುಟ್)

ಸುವರ್ಣ ಸೂತ್ರದ ಬಂಗಾರದ ತ್ರಿಭುಜ:
—————————————————————–

ಅಡೆತಡೆ ಸಿದ್ದಾಂತದ ಒಂದು ಪ್ರಮುಖ ಸುವರ್ಣ ಸೂತ್ರವೆಂದರೆ, ಕಂಪನಿಯ ಯಾ ಸಂಸ್ಥೆಯ ಕಾರ್ಯತಂತ್ರದ (ಸ್ಟ್ರಾಟೆಜಿ) ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ, ಅದು ಯಾವಾಗಲೂ ಈ ಮೂರು ಅಂಶಗಳಿಗೆ ಯಾವುದೆ ಧಕ್ಕೆ ಬರಿಸದಂತಿರಬೇಕು:

1. ಸತತ ಹಣಗಳಿಕೆ – ಪ್ರಸ್ತುತದಲ್ಲಿ , ಮತ್ತು ಭವಿಷ್ಯದಲ್ಲಿ ಸಹ
2. ಉದ್ಯೋಗಿಗಳ ಹಿತ ರಕ್ಷಣೆ ಕಾಯುವಿಕೆ – ಪ್ರಸ್ತುತದಲ್ಲಿ , ಮತ್ತು ಭವಿಷ್ಯದಲ್ಲಿ ಸಹ
3. ಮಾರುಕಟ್ಟೆಯ ಸಂತೃಪ್ತಿ ಕಾಯ್ದುಕೊಳ್ಳುವಿಕೆ – ಪ್ರಸ್ತುತದಲ್ಲಿ , ಮತ್ತು ಭವಿಷ್ಯದಲ್ಲಿ ಸಹ

ಈ ಮೂರಂಶಗಳ ಪರಸ್ಪರಾವಲಂಬಿತ ಗಣನೆಯೆ ಕಾರ್ಯತಂತ್ರದ ಕೆಂದ್ರಬಿಂದುವಾಗಿರಬೇಕು ಮತ್ತವು ಮೂರರ ನಡುವಿನ ಸಂಬಂಧ ಸರಪಳಿಯ ಕೊಂಡಿಯಂತೆ, ಯಾವಾಗಲೂ ಕವಲೊಡೆಯದಂತೆ ಸೌಹಾರ್ದಯುತವಾಗಿ ಜತೆಯಾಗಿರಬೇಕು. ಒಂದನ್ನು ಬಿಟ್ಟು ಇನ್ನೊಂದು ನಡೆಯುವಂತಿಲ್ಲ.

ನೈಜ್ಯತೆಯ ವೃಕ್ಷಗಳು (ರಿಯಾಲಿಟಿ ಟ್ರೀಸ್):
——————————————————————-

ಈ ಸಿದ್ದಾಂತದ ಅನುಸಾರ ಬದಲಾವಣೆಯು ಹಾದು ಹೋಗುವ ಹಂತಗಳನ್ನು ನಿಭಾಯಿಸಲು, ಈ ಮೂರು ಸಲಕರಣಾ ವಿಧಾನಗಳನ್ನು ಬಳಸಬಹುದು.

1. ಪ್ರಸ್ತುತ ವೃಕ್ಷ (ಕರೆಂಟ್ ರಿಯಾಲಿಟಿ ಟ್ರೀಸ್ – ಸಿ.ಆರ.ಟಿ) – ಇದು ಸದ್ಯದ ಸ್ಥಿತಿಯನ್ನು ಬಿಂಬಿಸಲು ಬಳಸಬಹುದಾದ ಸಿದ್ದಾಂತ ಸಲಕರಣೆ
2. ತಾತ್ಕಾಲಿಕ ಸೇತುವೆ ವೃಕ್ಷ(ಟ್ರಾನ್ಸಿಶನ್ ಟ್ರೀಸ್ – ಟಿ.ಆರ.ಟಿ,) – ಸದ್ಯದ ಮತ್ತು ಭವಿಷ್ಯದ ಸ್ಥಿತಿಯ ನಡುವಿನ ತಾತ್ಕಾಲಿಕ / ಅಂತರಿಕ ಸ್ಥಿತಿಯ ಸಲಕರಣೆ
3. ಭವಿತದ ವೃಕ್ಷ ( ಫ್ಯೂಚರು ರಿಯಾಲಿಟಿ ಟ್ರೀಸ್ – ಎಫ್.ಆರ.ಟಿ) – ಭವಿಷ್ಯದ ಸ್ಥಿತಿಯನ್ನು ಬಿಂಬಿಸಲು ಬಳಸಬಹುದಾದ ಸಲಕರಣೆ

————————————————————————————————————————————
ಉಪಸಂಹಾರ
————————————————————————————————————————————

ಟಿ.ಓ.ಸಿ ಎಂದು ಸಂಕ್ಷಿಪ್ತನಾಮದಲ್ಲಿ ಕರೆಯಲ್ಪಡುವ ಈ ಸಿದ್ದಾಂತದ ಪ್ರಮುಖ ಅಂಶವೆಂದರೆ, ಸಮಗ್ರ ದೃಷ್ಟಿಕೋನ. ಸ್ಥಳೀಕ ಅಂಶಗಳನ್ನು ಸಹ ಸಮಷ್ಟಿಯ, ಸಮಗ್ರತೆಯ ನೆಲೆಗಟ್ಟಿನಲ್ಲಿ ನೋಡಿ ನಿರ್ಧಾರಗಳನ್ನು ಅದೆ ನೆಲೆಗಟ್ಟಿನಲ್ಲಿ ಮಾಡುವಂತೆ ಪ್ರೇರೇಪಿಸುವುದು ಇದರ ಪ್ರಮುಖ ಆಶಯ. ಹಾಗೆಯೆ, ಪ್ರತಿಯೊಂದು ವ್ಯವಸ್ಥೆಯ ಆಂಗಿಕ ಅಂಶ / ವಿಭಾಗಗಳನ್ನೆಲ್ಲ ಒಂದು ಸರಪಳಿಯಾಗಿ ಸಮೀಕರಿಸಿ, ಸರಪಳಿಯ ದುರ್ಬಲ ಕೊಂಡಿಯೆ ಅದರ ಗರಿಷ್ಟಸಾಧ್ಯ ಶಕ್ತಿ ಎಂಬ ತತ್ವಾನುಸಾರ ಅನುವರ್ತಿಸಿ,ಮತ್ತೆ ಸಮಗ್ರತೆಯ ಮಸೂರದಲ್ಲಿ, ಸ್ಥಳೀಕ ಅಂಶಗಳ ಪ್ರಗತಿಸಲು ಯತ್ನಿಸುವ ಉದ್ದೇಶ ಇಲ್ಲಿ ಪ್ರತಿಬಿಂಬಿತ. ಹಾಗೆಯೆ ದುರ್ಬಲ ‘ತೊಡಕಪ್ಪಗಳನ್ನು’ ಹುಡುಕಿ ಅದನ್ನೆ ಶಕ್ತಿಯಾಗಿ ಪರಿವರ್ತಿಸಿಕೊಂಡು, ತನ್ಮೂಲಕ ಒಟ್ಟಾರೆ ಆಶಯಗಳ ಸಾಧನೆಗೆ ಶ್ರಮಿಸುವುದು, ಇಲ್ಲಿನ ವಿಶೇಷತೆ. ಹಾಗೆಂದು ಈ ಸಿದ್ದಾಂತವನ್ನು ಹೀಗಳೆಯುವವರು ಇಲ್ಲವೆಂದಲ್ಲ, ಎಲ್ಲೆಡೆಯು ಎಲ್ಲಾ ಸಿದ್ದಾಂತಕ್ಕೂ ಇರುವಂತೆ. ಹೊಸತಿನ ಸದಾಶಯಭರಿತ ಸಿದ್ದಾಂತವನ್ನು ಬಳಸಲುಚ್ಚಿಸುವವರಿಗೆ ಇದೊಂದು ಆಯ್ಕೆಯಾಗಿಯಂತು ಖಂಡಿತ ಲಭ್ಯವಿದೆ. ನಿಜವಾದ ಪಂಥವೆಂದರೆ – ಸಮಗ್ರ ಬದಲಾವಣೆ ಬಯಸುವ ಇಂಥ ಸಿದ್ದಾಂತಗಳ ಅನುಷ್ಟಾನಕ್ಕೆ ನಮ್ಮ ವಾತಾವರಣ ಮತ್ತು ಸಂಸ್ಥೆಗಳು ಅದೆಷ್ಟರಮಟ್ಟಿಗೆ ಸಿದ್ದವಾಗಿವೆ ಎಂಬುದು, ಮತ್ತು ಎಷ್ಟು ಉತ್ಸುಕವಾಗಿರುತ್ತವೆ ಎಂಬುದು!

– ನಾಗೇಶ ಮೈಸೂರು, ಸಿಂಗಾಪುರ, ೨೯.ಮಾರ್ಚ್. ೨೦೧೩
=====================================================================
ಜ್ಞಾನ ಋಣ : ದಶಕಕ್ಕು ಹೆಚ್ಚು ಕಾಲ ಸಂಗಾತಿಯಾಗಿ ಈ ಸಿದ್ದಾಂತದ ಜ್ಞಾನ ಭಿಕ್ಷೆ / ದೀಕ್ಷೆ ನೀಡಿದ ಟಿ.ಓ.ಸಿ. ಯ ಗುರು ಎಂದೆ ಹೆಸರಾದ ಲೇಖಕ ಗೋಲ್ಡ್ರಾಟನ ಹಲವಾರು ಟಿ.ಓ.ಸಿ.ಯ ಪುಸ್ತಕಗಳು. ಅದರಲ್ಲೂ ಪ್ರಮುಖವಾಗಿ, ‘ದಿ ಗೋಲ್’ ಮತ್ತು ‘ಇಟ್ಸ್ ನಾಟ್ ಲಕ್’; ಮತ್ತು ಅದರಿಂದುದಿಸಿದ ಕೆಲ ಸ್ವಾನುಭವದ ಅನುಭವ, ಅನುಭಾವಗಳು.
====================================================================

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s